ಕಡಬ: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ವಿಶಾಲ್ ಪೊಂಕೆ ನ್ಯಾಯಾಲಯಕ್ಕೆ ಶರಣು

ಕಡಬ: ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
2016ರಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ವಿಶಾಲ್ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿದ್ದ ಇತರ ಆರೋಪಿಗಳಾದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಅವರಿಗೆ ಪುತ್ತೂರಿನ ನ್ಯಾಯಾಲಯ ಈಗಾಗಲೇ 2 ವರ್ಷಗಳ ಶಿಕ್ಷೆ ವಿಧಿಸಿತ್ತು.
ಆದರೆ, ವಿಶಾಲ್ ಪೊಂಕೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಅಲ್ಲದೆ, ನ್ಯಾಯಾಲಯದಿಂದ ಆತನ ವಿರುದ್ಧ ಪ್ರೊಕ್ಲಮೇಶನ್ (ಘೋಷಿತ ಅಪರಾಧಿ) ಆದೇಶ ಹೊರಡಿಸಲಾಗಿತ್ತು.
ಇದೀಗ ಅಕ್ಟೋಬರ್ 30ರಂದು ವಿಶಾಲ್ ಪೊಂಕೆ ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ (ಸಂಚಾರಿ ನ್ಯಾಯಾಲಯ, ಕಡಬ) ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.







Comments