ಕಡಬದಲ್ಲಿ ಭೀಕರ ಘಟನೆ: ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ

ಕಡಬ, ಮೇ 6:
ಆಸ್ತಿ ವಿಚಾರ ಹಾಗೂ ಅಸೂಯೆಯಿಂದ ಮೈದುನನೊಬ್ಬ ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಪಾದೆಮಜಲು ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಐತ್ತೂರು ಗ್ರಾಮದ ನಿವಾಸಿ ಬೇಬಿ ಕೆ.ಎಸ್ (35) ಅವರು ಈ ಘಟನೆಯಲ್ಲಿ ಸಾವಿನ ಅಂಚಿನಿಂದ ಪಾರಾಗಿದ್ದಾರೆ. ಅವರು ತಮ್ಮ ಪತಿ ನೋಣಯ್ಯ ಗೌಡ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಕುಟುಂಬಕ್ಕೆ ಸೇರಿದ ಜಾಗವನ್ನು ಮೊದಲು ಅತ್ತೆಯವರು ಇಬ್ಬರು ಸಹೋದರರಿಗೆ ಹಂಚಿಕೆ ಮಾಡಿದ್ದರು.
ತಮಗೆ ಸಿಕ್ಕ ಜಾಗದಲ್ಲಿ ಮನೆ ನಿರ್ಮಾಣಕ್ಕಾಗಿ ಬೇಬಿ ಅವರು ಅಡಿಪಾಯ ಹಾಕಿ ಬೋರ್‌ವೆಲ್ ಕೊರೆಸಿದ್ದು, ಅದರಲ್ಲಿ ಸಮೃದ್ಧವಾಗಿ ನೀರು ದೊರಕಿತ್ತು. ಆದರೆ ಮೈದುನ ಕುಸುಮಾಧರ ಕೊರೆಸಿದ ಬೋರ್‌ವೆಲ್‌ನಲ್ಲಿ ನೀರು ಸಿಗದೇ ಇದ್ದ ಕಾರಣ, ಅಸೂಯೆಯಿಂದ ಪದೇ ಪದೇ ಕುಟುಂಬದೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿಪೊಟ್ಟಣ ಹಿಡಿದು ಮನೆಗೆ ಬಂದ ಕುಸುಮಾಧರ, “ನೀನು ನೆಮ್ಮದಿಯಿಂದ ಇರಬಾರದು” ಎಂದು ಬೆದರಿಕೆ ಹಾಕಿ, ಏಕಾಏಕಿ ಬೇಬಿ ಅವರ ಬೆನ್ನಿನ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ನಂತರ ಬೆಂಕಿ ಹಚ್ಚಲು ಯತ್ನಿಸಿದಾಗ, ಬೇಬಿ ಅವರು ಬೊಬ್ಬೆ ಹೊಡೆದಿದ್ದಾರೆ. ಸದ್ದು ಕೇಳಿ ಅತ್ತೆ ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ, ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಬೇಬಿ ಅವರು ಪಾರಾಗಿದ್ದಾರೆ.
ಘಟನೆ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಕಾನೂನು ಕ್ರಮದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.







Comments