
ಕಡಬ ಗುಂಡೇಟು ಪ್ರಕರಣಕ್ಕೆ ಹೊಸ ತಿರುವು - ವೈದ್ಯಕೀಯ ವರದಿ ಅಚ್ಚರಿ ಮಾಹಿತಿ ಬಹಿರಂಗ
- 12 minutes ago
- 1 min read

ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜ (ಕಡಬ ತಾಲೂಕು)ದಲ್ಲಿ ಜನವರಿ 24ರಂದು ನಡೆದ 17 ವರ್ಷದ ಬಾಲಕ ಮೋಕ್ಷ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವೈದ್ಯಕೀಯ ಮಾಹಿತಿ ಹೊರಬಿದ್ದಿದೆ. ಆರಂಭಿಕವಾಗಿ ಮೋಕ್ಷ್ ತನ್ನ ತಂದೆಗೆ ಚಾಕುವಿನಿಂದ ಇರಿದು ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಬಂದ ವೈದ್ಯಕೀಯ ಪರೀಕ್ಷಾ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ತಂದೆ ವಸಂತ ಅಮೀನ್ ಅವರ ಹೊಟ್ಟೆ ಭಾಗಕ್ಕೆ ತಗುಲಿರುವುದು ಚಾಕುವಿನ ಗಾಯವಲ್ಲ, ಬದಲಾಗಿ ಬಂದೂಕಿನ ಗುಂಡೇಟು ಎಂದು ದೃಢಪಟ್ಟಿದೆ. ಇದರಿಂದ ಪ್ರಕರಣದ ದಿಕ್ಕೇ ಬದಲಾಗಿದೆ.
ಏನಾಗಿದೆ ಘಟನೆ?
ಘಟನೆಯ ದಿನ ಕೌಟುಂಬಿಕ ಕಲಹ ತಾರಕಕ್ಕೇರಿತ್ತು ಎನ್ನಲಾಗಿದೆ. ಈ ವೇಳೆ ಮೋಕ್ಷ್ ತನ್ನ ತಂದೆಯ ಪರವಾನಗಿ ಹೊಂದಿದ ಎಸ್‌ಬಿಬಿಎಲ್ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಮುನ್ನೆಲೆಗೆ ಬಂದಿದೆ. ಬಳಿಕ ಅದೇ ಬಂದೂಕಿನಿಂದ ಆತ ತನ್ನ ಮೇಲೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವಸಂತ ಅಮೀನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಅವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ತಾಯಿಯ ದೂರು – ಪ್ರಕರಣ ಮತ್ತಷ್ಟು ಸಂಕೀರ್ಣ
ಈ ನಡುವೆ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದಿದ್ದು, ಮಗನನ್ನು ತಂದೆಯೇ ಕೊಲೆ ಮಾಡಿದ್ದಾರೆ ಎಂದು ತಾಯಿ ಜಯಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿ ಪೊಲೀಸರು
ಪ್ರಸ್ತುತ ವೈದ್ಯಕೀಯ ವರದಿ ಲಭ್ಯವಾಗಿದ್ದರೂ, ಅಂತಿಮ ಸತ್ಯ ತಿಳಿಯಲು Forensic Science Laboratory (FSL) ವರದಿ ಅತ್ಯಂತ ಮಹತ್ವದ್ದಾಗಿದೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಸದ್ಯ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಕರಣದ ನಿಜಸ್ವರೂಪ ಬಹಿರಂಗವಾಗಲು ಇನ್ನಷ್ಟು ದಿನಗಳ ನಿರೀಕ್ಷೆ ಅಗತ್ಯವಾಗಿದೆ.






Comments