ಆಭರಣ ಮಳಿಗೆಯಲ್ಲಿ 1.66 ಕೋಟಿ ರೂ. ಚಿನ್ನ ಕದ್ದ ಯುವತಿ ಬಂಧನ

ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿದಾ ಶೆಟ್ಟಿ ಎಂಬ ಯುವತಿ ₹1.66 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಘಟನೆ ನಡೆದಿದೆ. ಆರೋಪಿ ಕಳೆದ 11 ತಿಂಗಳಿನಿಂದ ದರ್ಶನ್ ಭಾಯ್ ಎಂಬುವವರ ಶೋ ರೂಂನಲ್ಲಿ ಸೇಲ್ಸ್ ವುಮೆನ್ ಆಗಿ ಕೆಲಸ ಮಾಡುತ್ತಿದ್ದಳು. ಮೇ 11 ರಂದು ಕಳ್ಳತನ ಮಾಡಿದ ಬಳಿಕ, ಸಹೋದ್ಯೋಗಿಗಳಿಗೆ ಸುಳ್ಳು ಹೇಳಿ ಆಕೆ ಪರಾರಿಯಾಗಿದ್ದಳು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಸದ್ಯಕ್ಕೆ ಆಕೆಯಿಂದ ₹22.54 ಲಕ್ಷ ಮೌಲ್ಯದ ಚಿನ್ನದ ಬಳೆ, ಮಂಗಳಸೂತ್ರ ಹಾಗೂ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಯಲ್ಲಿ, ಈ ಕಳ್ಳತನವನ್ನು ಆಕೆಯ ಸಹಚರ ಮಯೂರ್ ಅಶೋಕ್‌ಭಾಯ್ ಮಾಲಿ ಎಂಬಾತನ ಸಹಾಯದಿಂದ ಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಕಳ್ಳತನದ ನಂತರ ಇಬ್ಬರೂ ದೆಹಲಿ, ಜೈಪುರ ಸೇರಿದಂತೆ ಹಲವು ನಗರಗಳಿಗೆ ಓಡಿಹೋಗಿದ್ದರು.
ಸದ್ಯಕ್ಕೆ ಹರ್ಷಿದಾಳನ್ನು ನಿಕೋಲ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕದ್ದ ಆಭರಣಗಳಲ್ಲಿ ಹೆಚ್ಚಿನ ಭಾಗದೊಂದಿಗೆ ತಲೆಮರೆಸಿಕೊಂಡಿರುವ ಸಹಚರ ಮಯೂರ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.







Comments