ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸಾವು, ಕೆಂಪು ಬಾವುಟ ಹಾರಿಸಿದ ಇರಾನ್
- 4 hours ago
- 1 min read

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕೃತವಾಗಿ ಘೋಷಿಸಿದೆ. ಈ ಘಟನೆಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್ ತನ್ನ ಪವಿತ್ರ ಜಮ್ಕರನ್ ಮಸೀದಿಯ ಮೇಲೆ 'ಕೆಂಪು ಬಾವುಟ' ಹಾರಿಸುವ ಮೂಲಕ ಕಠಿಣ ಪ್ರತೀಕಾರದ ಸುಳಿವು ನೀಡಿದೆ. ಶಿಯಾ ಸಂಪ್ರದಾಯದಲ್ಲಿ ಈ ಕೆಂಪು ಧ್ವಜವು ಅನ್ಯಾಯವಾಗಿ ಚೆಲ್ಲಿದ ರಕ್ತದ ಸೇಡಿನ ಸಂಕೇತವಾಗಿದ್ದು, ಇಡೀ ದೇಶದಲ್ಲಿ ಈಗ ಆಕ್ರೋಶದ ಅಲೆ ಎದ್ದಿದೆ.
ಪ್ರತೀಕಾರವಾಗಿ ಇರಾನ್ ಅಮೆರಿಕದ ಏರ್‌ಕ್ರಾಫ್ಟ್ ಕ್ಯಾರಿಯರ್ USS ಅಬ್ರಹಾಂ ಲಿಂಕನ್ ಮತ್ತು ಇರಾಕ್, ಕುವೈತ್, ಬಹ್ರೇನ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ಅಮೆರಿಕದ ಸೈನಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್‌ನ ಬೀಟ್ ಶೆಮೆಶ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಯುಎಇ ರಕ್ಷಣಾ ಸಚಿವಾಲಯದ ವರದಿಯಂತೆ, ಇರಾನ್ ಹಾರಿಸಿದ ನೂರಾರು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ತಡೆಹಿಡಿಯಲಾಗಿದ್ದರೂ, ಅಮೆರಿಕದ 'ಆಪರೇಷನ್ ಎಪಿಕ್ ಫ್ಯೂರಿ' ವೇಳೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಖಮೇನಿ ನಿಧನದ ನಂತರ ಅಲಿರೆಝಾ ಅರಾಫಿ ನೇತೃತ್ವದಲ್ಲಿ ತಾತ್ಕಾಲಿಕ ನಾಯಕತ್ವ ಮಂಡಳಿ ರಚಿಸಲಾಗಿದ್ದು, ಅಹ್ಮದ್ ವಹಿದಿ ಅವರನ್ನು ಐಆರ್‌ಜಿಸಿ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. "ನಮ್ಮ ನಾಯಕನ ಹತ್ಯೆಗೆ ತಕ್ಕ ಶಾಸ್ತಿ ಮಾಡುತ್ತೇವೆ" ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಎಚ್ಚರಿಸಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಈ ನೇರ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರ ಸ್ವರೂಪ ಪಡೆಯುತ್ತಿದೆ.






Comments