ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್ ಬಹಿಷ್ಕಾರ: ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ, ಪಿಸಿಬಿಗೆ 4,500 ಕೋಟಿ ನಷ್ಟದ ಭೀತಿ!
- sathyapathanewsplu
- 2 hours ago
- 1 min read

ದುಬೈ: ಕ್ರಿಕೆಟ್ ಲೋಕದ ಹೈವೋಲ್ಟೇಜ್ ಕದನ ಎಂದೇ ಖ್ಯಾತಿಯಾಗಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಈಗ ಗ್ರಹಣ ಹಿಡಿದಿದೆ. ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿ ನಿರಾಕರಿಸಿದ್ದನ್ನು ವಿರೋಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹಠಮಾರಿ ನಿರ್ಧಾರದಿಂದ ಪಾಕಿಸ್ತಾನಕ್ಕೆ ಅಂಕಗಳ ನಷ್ಟ ಮಾತ್ರವಲ್ಲದೆ, ಐಸಿಸಿಯಿಂದ ಅಮಾನತುಗೊಳ್ಳುವ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ರಾಜಕೀಯ ಪ್ರೇರಿತ ನಿರ್ಧಾರವು ಕ್ರೀಡಾ ಜಗತ್ತಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಾಕಿಸ್ತಾನದ ಈ ನಿರ್ಧಾರದಿಂದ ಟೀಮ್ ಇಂಡಿಯಾಕ್ಕೆ ಭರ್ಜರಿ ಲಾಭವಾಗಲಿದೆ. ಐಸಿಸಿ ನಿಯಮದಂತೆ, ಒಂದು ತಂಡ ಪಂದ್ಯವನ್ನು ಬಹಿಷ್ಕರಿಸಿದರೆ ಎದುರಾಳಿ ತಂಡಕ್ಕೆ ಪೂರ್ಣ ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಭಾರತವು ಪಂದ್ಯವಾಡದೆಯೇ 2 ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಆದರೆ, ಆರ್ಥಿಕವಾಗಿ ಇದು ದೊಡ್ಡ ಹೊಡೆತ ನೀಡಲಿದೆ. ಭಾರತ-ಪಾಕ್ ಪಂದ್ಯದ ಒಟ್ಟು ಮೌಲ್ಯ ಸುಮಾರು 4,500 ಕೋಟಿ ರೂಪಾಯಿಗಳಾಗಿದ್ದು, ಪ್ರಸಾರ ಹಕ್ಕು, ಜಾಹೀರಾತು ಮತ್ತು ಪ್ರಾಯೋಜಕತ್ವದ ಮೂಲಕ ಬರಬೇಕಿದ್ದ ಕೋಟ್ಯಂತರ ಹಣ ಮಣ್ಣುಪಾಲಾಗಲಿದೆ. ಈ ನಷ್ಟದ ಪರಿಹಾರವನ್ನು ಪಿಸಿಬಿಯೇ ಭರಿಸಬೇಕೆಂದು ಜಿಯೋ-ಸ್ಟಾರ್ ನಂತಹ ಕಂಪನಿಗಳು ಒತ್ತಾಯಿಸುವ ಸಾಧ್ಯತೆಯಿದೆ.
ಇನ್ನೊಂದೆಡೆ, ಈ ಪಂದ್ಯವನ್ನು ನೋಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಮಾನ ಟಿಕೆಟ್ ಮತ್ತು ಹೋಟೆಲ್ ಬುಕ್ ಮಾಡಿದ್ದ ಅಭಿಮಾನಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಐಸಿಸಿ ನಿಯಮ ಉಲ್ಲಂಘಿಸಿದರೆ ಪಾಕಿಸ್ತಾನ ತಂಡಕ್ಕೆ ವಾರ್ಷಿಕ ಅನುದಾನ ಕಡಿತವಾಗುವುದಲ್ಲದೆ, ಪಾಕಿಸ್ತಾನ ಸೂಪರ್ ಲೀಗ್‌ಗೆ (PSL) ವಿದೇಶಿ ಆಟಗಾರರು ಬರದಂತೆ ಎನ್‌ಒಸಿ ನಿರಾಕರಿಸುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಪಾಕಿಸ್ತಾನದ ಈ ಒಂದು ನಿರ್ಧಾರ ಆ ದೇಶದ ಕ್ರಿಕೆಟ್ ಭವಿಷ್ಯವನ್ನೇ ಅತಂತ್ರಕ್ಕೆ ದೂಡುವಂತೆ ಕಾಣುತ್ತಿದೆ.






Comments