;
top of page

ಭಾರತ–ಪಾಕಿಸ್ತಾನ ಪಂದ್ಯ ಪಕ್ಕಾ ಆಗುತ್ತಿದ್ದಂತೇ ವ್ಯಾಪಾರ ಜ್ವರ; ಕೊಲಂಬೋ ಫ್ಲೈಟ್‌ ದರ ಗಗನಕ್ಕೇರಿಕೆ

  • Writer: sathyapathanewsplu
    sathyapathanewsplu
  • 2 days ago
  • 1 min read

ಕ್ರಿಕೆಟ್‌ ಈಗ ಕೇವಲ ಕ್ರೀಡೆಯಷ್ಟೇ ಅಲ್ಲ, ಕೋಟ್ಯಂತರ ಜನರ ಭಾವನೆಗಳ ಜೊತೆಗೆ ಭಾರೀ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿಬಿಟ್ಟಿದೆ. ಅದರಲ್ಲೂ ಭಾರತ–ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಜಾಗತಿಕ ಮಟ್ಟದಲ್ಲಿ ಅಪಾರ ಆದಾಯ ತಂದುಕೊಡುವ ಹೈವೋಲ್ಟೇಜ್‌ ಈವೆಂಟ್‌. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯೆಂಬಂತೆ, ಐಸಿಸಿ ಟಿ-20 ವಿಶ್ವಕಪ್‌ 2026ರಲ್ಲಿ ಭಾರತ–ಪಾಕಿಸ್ತಾನ ಪಂದ್ಯ ಖಚಿತವಾಗುತ್ತಿದ್ದಂತೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭಾರೀ ಆದಾಯ ನಷ್ಟದಿಂದ ಪಾರಾಗಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆರಂಭದಲ್ಲಿ ಭಾರತದ ವಿರುದ್ಧ ಪಂದ್ಯ ಆಡದಿರುವ ತೀರ್ಮಾನ ಕೈಗೊಂಡಿತ್ತು. ಆದರೆ ಮಿತ್ರ ರಾಷ್ಟ್ರಗಳ ಮನವಿ ಹಾಗೂ ಐಸಿಸಿ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ನಿಲುವಿನಿಂದ ಹಿಂದೆ ಸರಿದು ಯು-ಟರ್ನ್‌ ಹೊಡೆದಿದೆ. ಇದರೊಂದಿಗೆ ಫೆಬ್ರವರಿ 15ರಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಭಾರತ–ಪಾಕಿಸ್ತಾನ ನಡುವಿನ ಟಿ-20 ಪಂದ್ಯ ನಡೆಯುವುದು ಖಚಿತವಾಗಿದೆ.

ಮೂಲಗಳ ಪ್ರಕಾರ, ಒಂದು ವೇಳೆ ಈ ಪಂದ್ಯ ರದ್ದಾಗಿದ್ದರೆ ಐಸಿಸಿಗೆ ಸುಮಾರು 174 ಮಿಲಿಯನ್ ಅಮೆರಿಕನ್‌ ಡಾಲರ್‌ (ಸುಮಾರು ₹1,400 ಕೋಟಿ) ಆದಾಯ ನಷ್ಟವಾಗುತ್ತಿತ್ತು. ಪ್ರಸಾರ ಹಕ್ಕುಗಳು, ಟಿಕೆಟ್‌ ಮಾರಾಟ, ಗೇಟ್‌ ಮನಿ ಹಾಗೂ ಪ್ರಾಯೋಜಕತ್ವಗಳ ಮೂಲಕ ಐಸಿಸಿ ಈ ಪಂದ್ಯದಿಂದ ಅಪಾರ ಪ್ರಮಾಣದ ಹಣ ಗಳಿಸುತ್ತದೆ ಎನ್ನಲಾಗಿದೆ.

ಇದೇ ವೇಳೆ, ಪಂದ್ಯ ಖಚಿತವಾಗುತ್ತಿದ್ದಂತೇ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರದಲ್ಲೂ ತಕ್ಷಣ ಪರಿಣಾಮ ಕಂಡುಬಂದಿದೆ. ವಿಶೇಷವಾಗಿ ಮುಂಬೈ–ಕೊಲಂಬೋ ವಿಮಾನ ಮಾರ್ಗದಲ್ಲಿ ಟಿಕೆಟ್‌ ದರಗಳು ದಿಢೀರ್‌ ಏರಿಕೆಯಾಗಿವೆ. ಮೂಲಗಳ ಮಾಹಿತಿ ಪ್ರಕಾರ, ಭಾರತ–ಪಾಕಿಸ್ತಾನ ಪಂದ್ಯ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ರೌಂಡ್‌ ಟ್ರಿಪ್‌ ಟಿಕೆಟ್‌ ದರಗಳು ₹10,000ರಿಂದ ₹60,000ವರೆಗೆ ಏರಿಕೆಯಾಗಿದೆ.

ಐಸಿಸಿ ತನ್ನ ಅಧಿಕೃತ ಎಕ್ಸ್‌ (ಟ್ವಿಟರ್) ಖಾತೆಯಲ್ಲಿ, “ವೇಳಾಪಟ್ಟಿಯಂತೆ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದೆ” ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಈ ದಿಢೀರ್‌ ನಿಲುವು ಬದಲಾವಣೆ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಮತ್ತು ವಾಣಿಜ್ಯ ಲೆಕ್ಕಾಚಾರಗಳೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಒಟ್ಟಾರೆ, ಭಾರತ–ಪಾಕಿಸ್ತಾನ ಪಂದ್ಯವು ಮತ್ತೊಮ್ಮೆ ಕ್ರಿಕೆಟ್‌ ಕ್ರೀಡೆ ಮಾತ್ರವಲ್ಲ, ಜಾಗತಿಕ ಮಟ್ಟದ ಮಹಾ ವ್ಯವಹಾರವಾಗಿರುವುದನ್ನು ಸಾಬೀತುಪಡಿಸಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page