ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಅಸಮಾಧಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲೇ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಯೋಜಿಸಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಯದುವಂಶದ ಮಹಾರಾಜ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ದಸರಾ ಮಹೋತ್ಸವ ನಡೆಯುವ ಪವಿತ್ರ ಸಂದರ್ಭದಲ್ಲೇ ಕಂಬಳವನ್ನು ಯಾಕೆ ಆಯೋಜಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದು ಮೈಸೂರಿನ ಸ್ಥಳೀಯರ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಟೀಕಿಸಿದರು.
ದಸರಾ ಸಮಯದಲ್ಲಿ ಇಂತಹ ಆಚರಣೆಗಳನ್ನು ತರುವುದರಿಂದ ಎರಡು ಪ್ರದೇಶಗಳ ಜನರ ನಡುವೆ ಸಂಘರ್ಷ ಅಥವಾ ವಿಭಜನೆ ಉಂಟುಮಾಡುವ ಹುನ್ನಾರವೇ ಎಂಬ ಅನುಮಾನ ಮೂಡಿದೆ ಎಂದು ಯದುವೀರ್ ಆರೋಪಿಸಿದ್ದಾರೆ. ಕರಾವಳಿ ಭಾಗದಲ್ಲಿ ದಸರಾ ಆಚರಿಸಿದರೂ ತಾವು ವಿರೋಧಿಸುವುದಾಗಿ ಸ್ಪಷ್ಟಪಡಿಸಿದ ಅವರು, ಯಾವುದೇ ಪ್ರದೇಶದ ಸಂಪ್ರದಾಯಗಳನ್ನು ಆಚರಿಸುವಾಗ ಸ್ಥಳೀಯರ ಭಾವನೆಗಳಿಗೆ ಹಾಗೂ ಪ್ರಮುಖ ಹಬ್ಬದ ಸಂಪ್ರದಾಯಗಳಿಗೆ ಎಲ್ಲರೂ ಗೌರವ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸರ್ಕಾರವು ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಯದುವೀರ್ ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ದಸರಾ ದಸರಾ ಹೊತ್ತಿನ ಕಂಬಳದ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.







Comments