ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ: ಮೂವರು ಕಾರ್ಮಿಕರ ದುರ್ಮರಣ
- 4 days ago
- 1 min read

ಮಲೆನಾಡು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾದ ಹುಲಿಕಲ್ ಘಾಟ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಮೇಲ್ವಿಚಾರಕ ರಾಘವೇಂದ್ರ ಹಾಗೂ ಕಾರ್ಮಿಕರಾದ ರಾಜು ಮತ್ತು ಶಬ್ಬೀರ್ ಸಾವನ್ನಪ್ಪಿದ್ದಾರೆ. ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ದಿಢೀರನೆ ಮಣ್ಣು ಕುಸಿದಿದ್ದರಿಂದ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರು ಕಾರ್ಮಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಾಟಿ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ನಾಗೋಡಿ-ಕೊಲ್ಲೂರು ಮಾರ್ಗವಾಗಿ ಸಂಚರಿಸುವಂತಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಳೆಯ ಅಬ್ಬರದ ನಡುವೆಯೂ ರಕ್ಷಣಾ ಕಾರ್ಯ ಮುಂದುವರಿದಿದೆ.







Comments