ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಅಲ್ಲಿಯವರೆಗೆ ಸದ್ಯ ಚಾಲ್ತಿಯಲ್ಲಿರುವ ಸೌಲಭ್ಯಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಈ ಯೋಜನೆಗಳಲ್ಲಿ ಒಂದೇ ಮನೆಯಲ್ಲಿ ಇಬ್ಬರು-ಮೂವರು ಸೌಲಭ್ಯ ಪಡೆಯುತ್ತಿರುವುದು, ಆದಾಯ ತೆರಿಗೆ ಪಾವತಿದಾರರು ಹಾಗೂ ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ ವಿದ್ಯುತ್ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು ಸರ್ಕಾರ ಹೊಸದಾಗಿ ಅರ್ಜಿ ಕರೆಯಲು ಚಿಂತನೆ ನಡೆಸಿದೆ.
ಹೊಸ ಅರ್ಜಿ ಸಲ್ಲಿಕೆಯ ವಿಚಾರ ಹೊರಬರುತ್ತಿದ್ದಂತೆ ಜನಸಾಮಾನ್ಯರಲ್ಲಿ ಸೌಲಭ್ಯಗಳು ನಿಂತುಹೋಗಬಹುದೇ ಎಂಬ ಗೊಂದಲ ಹಾಗೂ ಆತಂಕ ಸೃಷ್ಟಿಯಾಗಿತ್ತು. ಆದರೆ ಸರ್ಕಾರವು ಸದ್ಯಕ್ಕೆ ಯಾರು ಕೂಡ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬವಾಗುವುದರಿಂದ ಈಗ ಸಿಗುತ್ತಿರುವ ಉಚಿತ ವಿದ್ಯುತ್ ಹಾಗೂ ಮಾಸಿಕ ಧನಸಹಾಯ ಮುಂದುವರೆಯಲಿದೆ.
ಪ್ರಸ್ತುತ ಹೊಸ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಮೊದಲು ಚಾಲ್ತಿಯಲ್ಲಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲನೆ ಮಾಡಲಾಗುತ್ತದೆ. ಈ ಪರಿಷ್ಕರಣೆ ಕಾರ್ಯ ಮುಗಿದ ನಂತರವಷ್ಟೇ ಮುಂದಿನ ಪ್ರಕ್ರಿಯೆಗಳು ಆರಂಭವಾಗಲಿದ್ದು, ಅಲ್ಲಿಯವರೆಗೂ ಯಾವುದೇ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ.
ಪಟ್ಟಿಯ ಮರುಪರಿಶೀಲನೆಗಾಗಿ ಸರ್ಕಾರವು ವಿಶೇಷ ಆ್ಯಪ್ ಒಂದನ್ನು ಬಳಸಲು ತೀರ್ಮಾನಿಸಿದೆ. ಇನ್ನು ಒಂದು ವಾರದಲ್ಲಿ ಈ ಮರು ಪರಿಶೀಲನಾ ಸರ್ವೆ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ. ಈ ಸರ್ವೆ ಮುಗಿಯುವವರೆಗೂ ಹೊಸದಾಗಿ ಯಾವುದೇ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ ಎಂದು ಹೆಚ್.ಎಂ. ರೇವಣ್ಣ ಅವರು ಮಾಧ್ಯಮಗಳಿಗೆ ಸಭೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.







Comments