ದುಬಾರೆ ಶಿಬಿರದಲ್ಲಿ ಆನೆಗಳ ಕಾಳಗ: ‘ಮಾರ್ತಾಂಡ’ ಸಾವು

ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 35 ವರ್ಷದ ‘ಮಾರ್ತಾಂಡ’ ಆನೆಯು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ಸೋಮವಾರ ನದಿಯಲ್ಲಿ ಸ್ನಾನ ಮಾಡಿಸುವಾಗ ದಸರಾ ಆನೆ ‘ಕಂಜನ್’ ಏಕಾಏಕಿ ಮಾರ್ತಾಂಡನ ಮೇಲೆ ದಾಳಿ ನಡೆಸಿತ್ತು.
ಇದೇ ಘಟನೆಯ ವೇಳೆ ಆನೆಗಳ ಕಾಳಗದ ಮಧ್ಯೆ ಸಿಲುಕಿದ ಚೆನ್ನೈನ ಪ್ರವಾಸಿ ಮಹಿಳೆ ಜುನೆಸ್ಸಿ (33) ಎಂಬುವವರು ಆನೆಯಡಿ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದಾರೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡನಿಗೆ ವೈದ್ಯರ ತಂಡ ಇಡೀ ರಾತ್ರಿ ತುರ್ತು ಚಿಕಿತ್ಸೆ ನೀಡಿದರೂ ತೀವ್ರ ರಕ್ತಸ್ರಾವದಿಂದಾಗಿ ಆನೆಯ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಆಕ್ರಮಣಕಾರಿ ವರ್ತನೆ ತೋರಿದ ‘ಕಂಜನ್’ ಆನೆಯನ್ನು ಇನ್ನುಮುಂದೆ ಮೈಸೂರು ದಸರಾ ಮಹೋತ್ಸವದಲ್ಲಿ ಬಳಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.







Comments