ದುಬಾರೆ ಸಾಕಾನೆ ಶಿಬಿರದಲ್ಲಿ ದಾರುಣ ದುರಂತ | ಆನೆಗಳ ಕಾಳಗದಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಸಾವು
- May 18
- 1 min read

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಲು ಬಂದಿದ್ದ ಪ್ರವಾಸಿ ಮಹಿಳೆಯೊಬ್ಬರು ಸಾಕಾನೆಗಳ ಕಾಳಗದ ನಡುವೆ ಸಿಲುಕಿ ದುರ್ಮರಣ ಹೊಂದಿದ್ದಾರೆ.
ಮೃತರನ್ನು ಚೆನ್ನೈ ಮೂಲದ ಜಿನ್ನು (33) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಸಾಕಾನೆಗಳನ್ನು ನದಿಗೆ ಕರೆತರಲಾಗಿತ್ತು.
ಮಾಹಿತಿಯ ಪ್ರಕಾರ, ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುತ್ತಿದ್ದಾಗ ಅದು ಪಕ್ಕದಲ್ಲಿದ್ದ ಕಂಜನ್ ಆನೆಗೆ ತಗುಲಿದ ಪರಿಣಾಮ ಕಂಜನ್ ಆನೆ ಆಕ್ರೋಶಗೊಂಡಿದೆ. ತಕ್ಷಣವೇ ಎರಡು ಆನೆಗಳ ನಡುವೆ ಭಾರೀ ಕಾಳಗ ಆರಂಭವಾಗಿದೆ.
ಈ ಆಕಸ್ಮಿಕ ಘಟನೆಯಿಂದ ಅಲ್ಲಿದ್ದ ಪ್ರವಾಸಿಗರು ಭಯಭೀತರಾಗಿ ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಆದರೆ ದುರದೃಷ್ಟವಶಾತ್ ಜಿನ್ನು ಅವರು ಆನೆಗಳ ನಡುವಿನ ಘರ್ಷಣೆಯಲ್ಲಿ ಸಿಲುಕಿ, ಆನೆಯ ಕಾಲಡಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ಸ್ಥಳದಲ್ಲಿದ್ದ ಪ್ರವಾಸಿಗರು ಬೆಚ್ಚಿಬಿದ್ದಿದ್ದು, ಮೃತದೇಹವನ್ನು ತಕ್ಷಣ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರ್ತಾಂಡ ಆನೆಯ ಮಾವುತ ಗೌಸ್ ಹಾಗೂ ಕಂಜನ್ ಆನೆಯ ಮಾವುತ ವಿಜಯ ಅವರು ಆನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಅಷ್ಟರಲ್ಲೇ ಅನಾಹುತ ಸಂಭವಿಸಿತ್ತು.
ದುಬಾರೆ ಶಿಬಿರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಿಶೇಷವಾಗಿ ಆನೆಗಳ ಸ್ನಾನದ ದೃಶ್ಯವನ್ನು ಹತ್ತಿರದಿಂದ ವೀಕ್ಷಿಸಲು ಜನರು ಹೆಚ್ಚಾಗಿ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ, ವಿಶೇಷವಾಗಿ ಆನೆಗಳ ಸಮೀಪದಲ್ಲಿರುವ ಸಂದರ್ಭಗಳಲ್ಲಿ ಕಡ್ಡಾಯ ಸುರಕ್ಷಿತ ಅಂತರ ಪಾಲನೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಸುಂದರ ಪ್ರವಾಸ ಒಂದು ಕ್ಷಣದಲ್ಲೇ ದುರಂತವಾಗಿ ಮಾರ್ಪಟ್ಟಿದ್ದು, ಮೃತರ ಕುಟುಂಬ ಹಾಗೂ ಪ್ರವಾಸಿಗರಲ್ಲಿ ಆಘಾತ ಮೂಡಿಸಿದೆ.







Comments