ದೊಡ್ಡಬಳ್ಳಾಪುರ ಮರಕ್ಕೆ ಢಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್!
- 7 days ago
- 1 min read

ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪ ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೆಟ್ರೋಲ್ ಟ್ಯಾಂಕರ್ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದ್ದು, ಬೆಂಕಿಯ ಜ್ವಾಲೆ ತೀವ್ರವಾಗಿ ಹರಡಿದೆ. ಇದೇ ವೇಳೆ ಅದರ ಸಮೀಪದಲ್ಲೇ ರಿವರ್ಸ್ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್‌ಗೂ ಆಕಸ್ಮಿಕವಾಗಿ ಬೆಂಕಿ ವ್ಯಾಪಿಸಿದೆ.
ಘಟನೆಯ ತೀವ್ರತೆಗೆ ಎರಡೂ ಟ್ಯಾಂಕರ್ ವಾಹನಗಳು ಸಂಪೂರ್ಣವಾಗಿ ಧಗಧಗನೆ ಹೊತ್ತಿ ಉರಿದಿವೆ. ಅದೃಷ್ಟವಶಾತ್, ಎರಡೂ ಲಾರಿಗಳ ಚಾಲಕರು ತಕ್ಷಣವೇ ಸಮಯಪ್ರಜ್ಞೆ ಮೆರೆದು ವಾಹನಗಳಿಂದ ಹೊರಗೆ ಜಿಗಿದಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಇಬ್ಬರೂ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಎರಡೂ ವಾಹನಗಳು ಬಹುತೇಕ ಸುಟ್ಟು ಭಸ್ಮವಾಗಿವೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







Comments