ದಕ್ಷಿಣ ಕನ್ನಡದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ-ಸೋಮೇಶ್ವರ ಸೇರಿದಂತೆ ಸುಮಾರು 17.74 ಕಿ.ಮೀ ಕರಾವಳಿ ತೀರವು ತೀವ್ರ ಕಡಲ್ಕೊರೆತಕ್ಕೆ ತುತ್ತಾಗುತ್ತಿದ್ದು, ಲೋಕಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಶೇ. 48.40 ರಷ್ಟು ಭಾಗವು ಕೊರೆತಕ್ಕೆ ಒಳಗಾಗುತ್ತಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ಕೇವಲ ಶೇ. 21.9 ರಷ್ಟು ತೀರ ಮಾತ್ರ ಸುರಕ್ಷಿತವಾಗಿದ್ದು, ಮೀನುಗಾರರ ಜೀವನೋಪಾಯಕ್ಕೆ ಇದು ದೊಡ್ಡ ಮಟ್ಟದ ಭೌಗೋಳಿಕ ಮತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ ಎಂದು ಅವರು ಸದನದ ಗಮನ ಸೆಳೆದರು.

ಬದಲಾಗುತ್ತಿರುವ ಹವಾಮಾನ ವೈಪರೀತ್ಯ, ಮುಂಗಾರಿನ ಅಲೆಗಳ ಅಬ್ಬರ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕರಾವಳಿಯ ಮನೆಗಳು ಮತ್ತು ರಸ್ತೆಗಳು ಸಮುದ್ರಪಾಲಾಗುತ್ತಿವೆ. ಮುಂಬರುವ ಮುಂಗಾರು ಮಳೆಗೆ ಮೊದಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಸಮಸ್ಯೆಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಕರಾವಳಿ ಜನರ ಆಸ್ತಿಪಾಸ್ತಿಗಳ ರಕ್ಷಣೆಗೆ ತಕ್ಷಣದ ಮಧ್ಯಪ್ರವೇಶ ಅಗತ್ಯವಿದೆ ಎಂದು ಸಂಸದರು ಪ್ರತಿಪಾದಿಸಿದರು. ಕಡಲ್ಕೊರೆತ ತಡೆಗೆ ಕೇವಲ ತಾತ್ಕಾಲಿಕ ಕ್ರಮಗಳಿಗಿಂತ ಶಾಶ್ವತ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ, ಕೇಂದ್ರ ಪರಿಸರ ಮತ್ತು ಭೂ ವಿಜ್ಞಾನ ಸಚಿವಾಲಯಗಳು ಸಮನ್ವಯತೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು. ಕರಾವಳಿ ರಕ್ಷಣೆಗೆ ಮೀಸಲಾದ ಹಣಕಾಸಿನ ನೆರವನ್ನು ತಕ್ಷಣವೇ ಬಿಡುಗಡೆಗೊಳಿಸಿ, ವೈಜ್ಞಾನಿಕ ಮಾದರಿಯ ತಡೆಗೋಡೆಗಳನ್ನು ನಿರ್ಮಿಸಬೇಕು. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತುರ್ತಾಗಿ ಹಸ್ತಕ್ಷೇಪ ಮಾಡಿ, ಕಡಲ ತೀರದ ಜನರ ಬದುಕನ್ನು ಸುಸ್ಥಿರಗೊಳಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕ್ಯಾ. ಬ್ರಿಜೇಶ್ ಚೌಟ ಅವರು ನಿಯಮ 377ರಡಿ ಒತ್ತಾಯಿಸಿದ್ದಾರೆ.







Comments