ಸ್ಯಾಂಡಲ್‌ವುಡ್‌ಗೆ ಶಾಕ್: ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ
- May 13
- 1 min read

ಬೆಂಗಳೂರು, ಮೇ 13:
ಕನ್ನಡ ಚಿತ್ರರಂಗಕ್ಕೆ ದುಃಖದ ಸುದ್ದಿ ಎದುರಾಗಿದೆ. ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ (47) ಅವರು ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲಗಳ ಪ್ರಕಾರ, ಮುಂಜಾನೆ ಮನೆಯಲ್ಲಿಯೇ ದಿಲೀಪ್ ರಾಜ್ ಅವರು ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ. ನಂತರ ಅವರ ಪಾರ್ಥಿವ ಶರೀರವನ್ನು ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿದೆ.
ದಿಲೀಪ್ ರಾಜ್ ಅವರು ಕನ್ನಡ ಸಿನಿಮಾರಂಗದಲ್ಲಿ ಹಲವು ವೈವಿಧ್ಯಮಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ನಾಯಕ, ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಕಿರುತೆರೆಯಲ್ಲಿಯೂ ಅವರು ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದರು. ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು.
ಸಿನಿಮಾರಂಗದಲ್ಲಿ ‘ಮಿಲನ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅದೇ ಅವರ ಕೊನೆಯ ಚಿತ್ರವಾಗಿದೆ.
ಇದೇ ವೇಳೆ, ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದು, ಎರಡು ಧಾರಾವಾಹಿಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.
ದಿಲೀಪ್ ರಾಜ್ ಅವರ ಹಠಾತ್ ನಿಧನವು ಸಿನಿರಂಗ ಹಾಗೂ ಅಭಿಮಾನಿಗಳಲ್ಲಿ ತೀವ್ರ ಶೋಕದ ವಾತಾವರಣ ಉಂಟುಮಾಡಿದೆ. ಹಲವಾರು ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ







Comments