ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಪ್ರಯಾಣ ದರ ಸದ್ಯಕ್ಕಿಲ್ಲ ಏರಿಕೆ: ಮಾಲಕರ ಸಂಘದ ತೀರ್ಮಾನ
- May 23
- 1 min read

ಡೀಸೆಲ್ ದರ ಏರಿಕೆ, ಬಿಡಿ ಭಾಗಗಳ ಬೆಲೆ ಹೆಚ್ಚಳ, ತೆರಿಗೆ ಮತ್ತು ವಿಮೆ ವೆಚ್ಚಗಳಿಂದಾಗಿ ಖಾಸಗಿ ಬಸ್ ಮಾಲಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದ್ದರೂ, ಸದ್ಯದ ಮಟ್ಟಿಗೆ ದರ ಹೆಚ್ಚಳ ಮಾಡದಿರಲು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ನಿರ್ಧರಿಸಿದೆ. ಮುಂದಿನ ಒಂದು ತಿಂಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅವರು, ಕಳೆದ ಐದು ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಡೀಸೆಲ್ ಬೆಲೆಯನ್ನು ಒಂದು ತಿಂಗಳ ಕಾಲ ಗಮನಿಸಿ, ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದ ಬಳಿಕವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಮುಂಗಾರು ಮಳೆ ಹಾಗೂ ಹೊಸ ಶೈಕ್ಷಣಿಕ ಸಾಲು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬಸ್ ಚಾಲಕರು ಹಾಗೂ ನಿರ್ವಾಹಕರು ಸೌಮ್ಯವಾಗಿ ವರ್ತಿಸಬೇಕು ಎಂದು ಸೂಚಿಸಲಾಗಿದೆ. ಮಳೆಯ ಸಮಯದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸಿ ಪ್ರಯಾಣಿಕರನ್ನು ತಲುಪಿಸುವಂತೆ ಸಂಘದಿಂದ ಬಸ್ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಅವರು ಹೇಳಿದರು.







Comments