ದಕ್ಷಿಣ ಕನ್ನಡ ರೈತರ ಗನ್ ಲೈಸನ್ಸ್ ಸಮಸ್ಯೆ: ತುರ್ತು ಸ್ಪಂದನೆಗೆ ಸಂಸದ ಕ್ಯಾ. ಚೌಟ ಪತ್ರ
- Jun 3
- 1 min read

ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ವನ್ಯಜೀವಿಗಳ ಉಪಟಳದಿಂದ ಬೆಳೆ ರಕ್ಷಿಸಿಕೊಳ್ಳಲು ಬಳಸುವ ಬಂದೂಕು ಪರವಾನಗಿ (ಗನ್ ಲೈಸನ್ಸ್) ನವೀಕರಣ ಪ್ರಕ್ರಿಯೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಗಳ ನೆಪವೊಡ್ಡಿ ಅಧಿಕಾರಿಗಳು ರೈತರ ನವೀಕರಣ ಅರ್ಜಿಗಳನ್ನು ವ್ಯವಸ್ಥಿತವಾಗಿ ತಿರಸ್ಕರಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ವನ್ಯಜೀವಿಗಳು ಕೃಷಿ ಭೂಮಿಗೆ ಹಾನಿ ಮಾಡಿಲ್ಲ ಎಂಬ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಆದರೆ, ರೈತರ ಬಳಿ ಬಂದೂಕು ಇರುವುದೇ ಪ್ರಾಣಿಗಳು ಬರದಂತೆ ತಡೆಯುವ ಮುಖ್ಯ ಶಕ್ತಿಯಾಗಿದೆ ಎಂದು ಸಂಸದರು ನೆನಪಿಸಿದ್ದಾರೆ. ಕಾಡುಪ್ರಾಣಿಗಳ ದಾಳಿ ಅನಿರೀಕ್ಷಿತವಾಗಿದ್ದು, ಪರವಾನಗಿ ಸಿಗದಿದ್ದರೆ ಕಣ್ಣೆದುರೇ ಕೃಷಿ ನಾಶವಾಗಿ ರೈತರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಕೃಷಿಕರು ಕೇವಲ ಬೆಳೆ ಹಾಗೂ ಆತ್ಮರಕ್ಷಣೆಗಾಗಿ ಬಂದೂಕು ಹೊಂದಿರುತ್ತಾರೆ. ಆದ್ದರಿಂದ ಜಿಲ್ಲಾಡಳಿತವು ವಾಸ್ತವಿಕ ನೆಲೆಯಲ್ಲಿ ನಿಯಮಗಳನ್ನು ಮರುಪರಿಶೀಲಿಸಿ ಸರಳೀಕೃತಗೊಳಿಸಬೇಕು. ಅರ್ಹ ರೈತರ ಅರ್ಜಿಗಳನ್ನು ಯಾವುದೇ ಅಡೆತಡೆಯಿಲ್ಲದೆ ನವೀಕರಿಸಿಕೊಡಲು ಅಧಿಕಾರಿಗಳಿಗೆ ಆದೇಶಿಸಬೇಕೆಂದು ಕೋರಿರುವ ಚೌಟ ಅವರು, ಈ ಗಂಭೀರ ಸಮಸ್ಯೆಯನ್ನು ಡಿಜಿಪಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ಗಮನಕ್ಕೂ ತಂದಿದ್ದಾರೆ.







Comments