ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಭೂಕುಸಿತ ಭೀತಿ: ಅಪಾಯದ ವಲಯದಲ್ಲಿ 88 ಪ್ರದೇಶಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಭೂಕುಸಿತದ ಆತಂಕ ತೀವ್ರಗೊಂಡಿದೆ. ಜಿಲ್ಲೆಯ 100ಕ್ಕೂ ಹೆಚ್ಚು ಪ್ರದೇಶಗಳು ಕುಸಿತದ ಭೀತಿಯಲ್ಲಿದ್ದು, ಇವುಗಳಲ್ಲಿ 88 ಸ್ಥಳಗಳನ್ನು ಅತೀ ಅಪಾಯಕಾರಿ ವಲಯಗಳೆಂದು ಗುರುತಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಇತ್ತೀಚಿನ ನಾಗುರಿ ದುರಂತವು ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ.
ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ಪ್ರಕಾರ, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಸೇರಿದಂತೆ 35ಕ್ಕೂ ಹೆಚ್ಚು ಪಶ್ಚಿಮ ಘಟ್ಟದ ಪಾದಭಾಗಗಳು ತೀವ್ರ ಸೂಕ್ಷ್ಮ ಪ್ರದೇಶಗಳಾಗಿವೆ. ಇನ್ನು ಕಳೆದ ವರ್ಷ ಭಾರಿ ಕುಸಿತ ಕಂಡಿದ್ದ ಮಂಗಳೂರಿನ ಕೆತ್ತಿಕಲ್‌ನಲ್ಲಿ ತಡೆಗೋಡೆ ಕಾಮಗಾರಿ ಅಪೂರ್ಣಗೊಂಡಿದ್ದು, ಹತ್ತಿರದ 200ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಮತ್ತೆ ಅಪಾಯ ಎದುರಾಗಿದೆ.
ಜಿಲ್ಲೆಯ ಬಂಟ್ವಾಳದ ಅಮ್ಡಾಡಿ, ಮಂಗಳೂರಿನ ಅಡ್ಡೂರು, ಸುಳ್ಯದ ಸಂಪಾಜೆ, ಕಡಬದ ಶಿರಾಡಿ, ಮತ್ತು ಪುತ್ತೂರಿನ ಬಜತ್ತೂರು ಸೇರಿದಂತೆ ಹಲವು ಗ್ರಾಮಗಳು ರೆಡ್ ಅಲರ್ಟ್ ಪಟ್ಟಿಯಲ್ಲಿವೆ. ಮಳೆ ಹೆಚ್ಚಾದಂತೆ ಆಸ್ತಿ-ಪಾಸ್ತಿ ನಷ್ಟ ನಿರಂತರವಾಗುತ್ತಿದ್ದು, ಸಂತ್ರಸ್ತರು ಸೂಕ್ತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಪ್ರಾಣಹಾನಿ ತಡೆಯಲು ಮುಂಜಾಗ್ರತಾ ಕ್ರಮಗಳ ಅಗತ್ಯವಿದೆ.







Comments