ಮಂಗಳೂರು: ದೈವಾರಾಧನೆ ಸಂಪ್ರದಾಯಕ್ಕೆ ಅಪಚಾರ; ದೈವ ನರ್ತನದ ಬಗ್ಗೆ ಹೊಸ ವಿವಾದ!

ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ನೇಮೋತ್ಸವದ ವೇಳೆ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಾರಂದಾಯ ಮತ್ತು ಬಂಟ ದೈವಕ್ಕೆ ನಡೆದ ನೇಮೋತ್ಸವದಲ್ಲಿ ಬಂಟ ದೈವದ ನರ್ತನವನ್ನು ಕ್ರೈಸ್ತ ಧರ್ಮದ ಯುವಕನೊಬ್ಬನಿಂದ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಳುನಾಡಿನ ದೈವಾರಾಧನೆಯ ಪದ್ಧತಿಯಂತೆ ಕೇವಲ ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಈ ಪವಿತ್ರ ಸೇವೆಯನ್ನು ಸಲ್ಲಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ.

ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದರೂ, ತಾಯಿ ಕ್ರೈಸ್ತ ಧರ್ಮದವರಾಗಿರುವುದರಿಂದ ಈ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೈವರಾಧನೆಗೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಅಪಮಾನವಾಗುತ್ತಿರುವ ಬೆನ್ನಲ್ಲೇ ಈ ವಿದ್ಯಮಾನ ಮುನ್ನೆಲೆಗೆ ಬಂದಿದ್ದು, ತುಳುನಾಡಿನಾದ್ಯಂತ ಸಂಪ್ರದಾಯದ ರಕ್ಷಣೆ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಈ ವಿವಾದವು ದೈವಾರಾಧನೆಯ ಕಟ್ಟುಪಾಡುಗಳು ಮತ್ತು ಧಾರ್ಮಿಕ ಚೌಕಟ್ಟಿನ ಕುರಿತು ಹೊಸ ಆಯಾಮದ ವಿವಾದವನ್ನು ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.







Comments