ಮಂಗಳೂರಿಗರಿಗೆ ಡಬಲ್ ಶಾಕ್: ವಂದೇ ಭಾರತ್ ಮಂಗಳೂರು ನಗರಕ್ಕೆ ಇಲ್ಲ, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ?
- sathyapathanewsplu
- 12 hours ago
- 1 min read
ಮಂಗಳೂರು, ಫೆ.11: ಬೆಂಗಳೂರು–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆ ಕರಾವಳಿಗರಿಗೆ ಡಬಲ್ ಶಾಕ್ ಎದುರಾಗುವ ಸಾಧ್ಯತೆ ಮೂಡಿದೆ. ಮಂಗಳೂರು ನಗರಕ್ಕೆ ವಂದೇ ಭಾರತ್ ಪ್ರವೇಶಿಸದಿರುವ ಪ್ರಸ್ತಾವನೆ ಜೊತೆಗೆ, ಹಗಲಿನ ಜನಪ್ರಿಯ 16575/16576 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಪಡೀಲ್ ಬೈಪಾಸ್ ಮೂಲಕವೇ ಸಂಚರಿಸಲಿದೆ. ಇದರಿಂದ ಮಂಗಳೂರು ಜಂಕ್ಷನ್‌ಗೆ ರೈಲು ಬಾರದಿರುವ ಸಾಧ್ಯತೆ ಇದೆ. ಇದೇ ವೇಳೆ, ಹೊಸ ರೈಲಿನ ವೇಳಾಪಟ್ಟಿಗೆ ಅವಕಾಶ ಕಲ್ಪಿಸಲು ಬೆಂಗಳೂರು–ಮಂಗಳೂರು ಮಧ್ಯೆ ಸಾವಿರಾರು ಪ್ರಯಾಣಿಕರ ಜೀವನಾಡಿಯಾಗಿರುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಸಮಯದಲ್ಲಿ ಬದಲಾವಣೆ ಮಾಡುವ ಪ್ರಸ್ತಾವನೆ ರೈಲ್ವೆ ಇಲಾಖೆಯಲ್ಲಿ ಚರ್ಚೆಯಲ್ಲಿದೆ.
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ದಕ್ಷಿಣ ಕನ್ನಡ, ಹಾಸನ ಹಾಗೂ ಬೆಂಗಳೂರಿನ ಪ್ರಯಾಣಿಕರಿಗೆ ಹಗಲಿನ ಸುಲಭ ಸಂಪರ್ಕ ಒದಗಿಸುತ್ತಿತ್ತು. ಪ್ರಸ್ತುತ 16576 ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7ಕ್ಕೆ ಹೊರಟು ಸಂಜೆ 4.30ಕ್ಕೆ ಯಶವಂತಪುರ ತಲುಪುತ್ತಿದೆ. ಸಮಯ ಬದಲಾವಣೆಯಿಂದ ಮಧ್ಯಾಹ್ನ ಹೊರಟು ತಡರಾತ್ರಿ ತಲುಪುವ ಪರಿಸ್ಥಿತಿ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಮತ್ತು ಮಹಿಳಾ ಪ್ರಯಾಣಿಕರಿಗೆ ಇದರಿಂದ ತೊಂದರೆ ಉಂಟಾಗಲಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
2017ರ ಏಪ್ರಿಲ್ 9ರಂದು ಆಗಿನ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು. ಸತತ ಒತ್ತಾಯದ ಬಳಿಕ 2024ರಿಂದ ರೈಲಿನ ಸಮಯದಲ್ಲಿ ಸುಧಾರಣೆ ಮಾಡಲಾಗಿತ್ತು. ಇದೀಗ ಮತ್ತೆ ವೇಳಾಪಟ್ಟಿ ಬದಲಾವಣೆ ಮಾಡುವ ಯೋಚನೆಗೆ ಕರಾವಳಿಯಲ್ಲಿ ಆಕ್ರೋಶ ಹೆಚ್ಚಾಗಿದೆ.
ಈ ಕುರಿತು ರೈಲ್ವೆ ಮಂಡಳಿಗೆ ಹಾಗೂ ರೈಲ್ವೆ ಸಚಿವರಿಗೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಗಳು ಮನವಿ ಸಲ್ಲಿಸಿವೆ. “ವಂದೇ ಭಾರತ್ ರೈಲು ಪಡೀಲ್ ಬೈಪಾಸ್ ಮೂಲಕ ಗೋವಾಕ್ಕೆ ಓಡಲಿ ಅಥವಾ ಮಂಗಳೂರು ಜಂಕ್ಷನ್ ಮೂಲಕವೇ ಸಂಚರಿಸಲಿ, ಆದರೆ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿಗೆ ಯಾವುದೇ ರೀತಿಯ ಬದಲಾವಣೆ ಮಾಡಬಾರದು” ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು “ಇಲ್ಲಿಯವರೆಗೆ ಅಂತಿಮ ವೇಳಾಪಟ್ಟಿ ಬಂದಿಲ್ಲ; ಅಧಿಕೃತ ಮಾಹಿತಿ ಸಿಕ್ಕ ಬಳಿಕ ಸ್ಪಷ್ಟನೆ ನೀಡಲಾಗುವುದು” ಎಂದು ತಿಳಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಆರಂಭಗೊಂಡಿದ್ದು, ಅಗತ್ಯವಿದ್ದರೆ ಪ್ರತಿಭಟನೆಗೂ ಸಿದ್ಧತೆ ನಡೆಸಲಾಗುತ್ತಿದೆ.







Comments