ಭಾರತ-ಯುರೋಪಿಯನ್ ಒಕ್ಕೂಟದ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ: ಕರ್ನಾಟಕದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ. ಬೂಸ್ಟ್!

ನವದೆಹಲಿ: ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಘೋಷಿಸಿದ್ದಾರೆ. ಜಾಗತಿಕ ಜಿಡಿಪಿಯ ಶೇ. 25ರಷ್ಟು ಪಾಲನ್ನು ಹೊಂದಿರುವ ಈ ಒಪ್ಪಂದವು, ವಿಶ್ವ ವ್ಯಾಪಾರದ ಮೂರನೇ ಒಂದು ಭಾಗವನ್ನು ಒಳಗೊಂಡಿದೆ. 140 ಕೋಟಿ ಭಾರತೀಯರು ಹಾಗೂ ಕೋಟ್ಯಂತರ ಯುರೋಪಿಯನ್ನರಿಗೆ ಈ ಒಪ್ಪಂದವು ಉದ್ಯೋಗ ಮತ್ತು ಆರ್ಥಿಕ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯಲಿದೆ ಎಂದು ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಒಪ್ಪಂದದಿಂದಾಗಿ ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಅಭೂತಪೂರ್ವ ಲಾಭವಾಗಲಿದೆ. ಪ್ರಮುಖವಾಗಿ ರಾಜ್ಯದಿಂದ ಯುರೋಪ್‌ಗೆ ರಫ್ತಾಗುವ ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧೀಯ ಉತ್ಪನ್ನಗಳು (ಫಾರ್ಮಾ), ವೈದ್ಯಕೀಯ ಉಪಕರಣಗಳು ಹಾಗೂ ಜವಳಿ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದ್ದು, ರಫ್ತು ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ. ಇದರಿಂದಾಗಿ ಕರ್ನಾಟಕದ ಉತ್ಪನ್ನಗಳಿಗೆ 27 ಯುರೋಪಿಯನ್ ರಾಷ್ಟ್ರಗಳ ಬೃಹತ್ ಮಾರುಕಟ್ಟೆ ಮುಕ್ತವಾಗಲಿದ್ದು, ರಾಜ್ಯದ ಆರ್ಥಿಕತೆಗೆ ಸುಮಾರು 6.4 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
ವ್ಯಾಪಾರದ ಜೊತೆಗೆ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯಲ್ಲೂ ಉಭಯ ದೇಶಗಳು ಕೈಜೋಡಿಸಿರುವುದು ಈ ಒಪ್ಪಂದದ ವಿಶೇಷತೆಯಾಗಿದೆ. ಸುಂಕಗಳ ಕಡಿತದಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಅಂತರಾಷ್ಟ್ರೀಯ ವೇದಿಕೆ ಲಭ್ಯವಾಗಲಿದ್ದು, ಕರ್ನಾಟಕದ ಕೆಮಿಕಲ್ಸ್ ಮತ್ತು ಅಪಾರೆಲ್ಸ್ ಕ್ಷೇತ್ರಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಸಹಕಾರಿಯಾಗಲಿದೆ. ಈ ಮಹತ್ವದ ನಿರ್ಧಾರವು ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಮಾಡುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.







Comments