ಬೆಂಗಳೂರಿನಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ: ಪ್ರಾಣ ಬೆದರಿಕೆ ಹಾಕಿದ್ದ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲು
- sathyapathanewsplu
- 3 days ago
- 1 min read

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ವೀಣಾ ಶಿಕ್ಷಣ ಸಂಸ್ಥೆಯಲ್ಲಿ 4ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಅತಿಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೇವಲ ಮನೆಗೆಲಸ (Homework) ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಆಂಗ್ಲಿನ್ ಎಂಬುವವರು ಬಾಲಕನ ಮೈಮೇಲೆ ಬಾಸುಂಡೆಗಳು ಬರುವಂತೆ ಮನಬಂದಂತೆ ಥಳಿಸಿದ್ದಾರೆ. ಘಟನೆಯ ನಂತರ ಶಿಕ್ಷಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಜೀವ ಬೆದರಿಕೆ ಹಾಕಿದ್ದರಿಂದ ಬಾಲಕ ಭಯಭೀತನಾಗಿ ಮೌನಕ್ಕೆ ಶರಣಾಗಿದ್ದ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ಕೆಲಸ ಮಾಡುವ ಬಾಲಕನ ತಾಯಿ ಲಕ್ಷ್ಮೀ ಅವರು ಇತ್ತೀಚೆಗೆ ಹಾಸ್ಟೆಲ್‌ನಲ್ಲಿರುವ ಮಗನನ್ನು ನೋಡಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕನ ಕೈಕಾಲುಗಳ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ಆತಂಕಗೊಂಡ ತಾಯಿ ವಿಚಾರಿಸಿದಾಗ, ಶಿಕ್ಷಕಿಯ ದೌರ್ಜನ್ಯದ ಬಗ್ಗೆ ಬಾಲಕ ಕಣ್ಣೀರಿಡುತ್ತಾ ವಿವರಿಸಿದ್ದಾನೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೂ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ, ನೊಂದ ತಾಯಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಸದ್ಯ ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಶಿಕ್ಷಕಿ ಮತ್ತು ಶಾಲಾ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಸಂಕೋಲೆ ಬಿಗಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿಯು ಆರೋಪಿ ಶಿಕ್ಷಕಿ ಆಂಗ್ಲಿನ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿದೆ. ಮಕ್ಕಳ ಮೇಲಿನ ಇಂತಹ ದೈಹಿಕ ದೌರ್ಜನ್ಯಗಳು ಪೋಷಕರಲ್ಲಿ ಆತಂಕ ಮೂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.






Comments