;
top of page

ಸಾಲ ತೀರಿಸಲು ಕಿಡ್ನ್ಯಾಪ್ ನಾಟಕ; ತಂದೆಯಿಂದ ₹90 ಲಕ್ಷಕ್ಕೆ ಡಿಮ್ಯಾಂಡ್

Oct 2
1 min read



ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಕಥೆ ಕಟ್ಟಿದ 40 ವರ್ಷದ ವ್ಯಕ್ತಿ; ಇಬ್ಬರು ಸ್ನೇಹಿತರ ಜೊತೆ ಬಂಧನ


ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ಸಾಲ ತೀರಿಸಲು ತನ್ನದೇ ಕಿಡ್ನ್ಯಾಪ್ ನಾಟಕವಾಡಿ, ತಂದೆಯಿಂದಲೇ ₹90 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಮನೀಷ್ (40) ಎಂಬಾತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಹೆದರಿಕೆ ಹುಟ್ಟಿಸುವಂತೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಸ್ನೇಹಿತರ ಮೂಲಕ ಮನೀಷ್‌ನದೇ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸಾಪ್ ಕರೆ ಮಾಡಿಸಿ, “ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ. ಆತನನ್ನು ಬಿಡಬೇಕಾದರೆ ₹90 ಲಕ್ಷ ನೀಡಬೇಕು” ಎಂದು ಬೇಡಿಕೆ ಇಟ್ಟಿದ್ದರು.


ಹಣದ ವ್ಯವಹಾರವೆಂದು ಗದಗಕ್ಕೆ ತೆರಳಿದ್ದ


ಘಟನೆಗೂ ಮುನ್ನ ಮನೀಷ್ ಹಣದ ವ್ಯವಹಾರವೊಂದಕ್ಕಾಗಿ ರೈಲಿನಲ್ಲಿ ಗದಗಕ್ಕೆ ತೆರಳುವುದಾಗಿ ತಂದೆಗೆ ತಿಳಿಸಿದ್ದ. ಬೆಳಗ್ಗೆ ಕರೆ ಮಾಡುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ಬೆಳಗ್ಗೆ ಮನೀಷ್ ಬದಲಿಗೆ ಅಪರಿಚಿತರು ಕರೆ ಮಾಡಿ ಕಿಡ್ನ್ಯಾಪ್ ಆಗಿರುವುದಾಗಿ ತಿಳಿಸಿದ್ದರಿಂದ ತಂದೆ ಆತಂಕಗೊಂಡಿದ್ದರು.


ತಕ್ಷಣವೇ ಮನೋಹರ್ ಪಟೇಲ್ ಆರ್.ಆರ್.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.


ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಸಿಕ್ಕ ಸುಳಿವು


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೀಷ್‌ನ ಮೊಬೈಲ್‌ನ್ನು ಟ್ರ್ಯಾಕ್ ಮಾಡಲು ಮುಂದಾದಾಗ ಅದು ಸ್ವಿಚ್‌ಆಫ್ ಆಗಿರುವುದು ಪತ್ತೆಯಾಯಿತು. ಈ ನಡುವೆ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಹಣದ ವ್ಯವಸ್ಥೆ ಆಗಿದೆಯೇ? ಎಂದು ಕರೆ ಬಂದಿತ್ತು.


ಆ ಸಂಖ್ಯೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಅದರ ಲೊಕೇಷನ್ ಹಾಸನ ಭಾಗದಲ್ಲಿ ಇರುವುದು ಗೊತ್ತಾಗಿದೆ. ತನಿಖೆ ಮುಂದುವರಿಸಿದ ಪೊಲೀಸರು ಅಲ್ಲಿನ ಒಂದು ಕೊಠಡಿಯಲ್ಲಿ ಮನೀಷ್ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಇರುವುದನ್ನು ಪತ್ತೆಹಚ್ಚಿದ್ದಾರೆ.


ವಿಚಾರಣೆ ವೇಳೆ ಬಯಲಾಯ್ತು ಅಸಲಿ ಕಥೆ


ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಪ್ರಕರಣದ ಅಸಲಿ ಸಂಗತಿ ಬಯಲಾಗಿದೆ. ಮನೀಷ್ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ದೊಡ್ಡ ಮೊತ್ತದ ಹಣದ ಅಗತ್ಯವಿತ್ತು. ಹೀಗಾಗಿ ತಂದೆಯಿಂದ ಹಣ ಪಡೆಯಲು ತನ್ನದೇ ಕಿಡ್ನ್ಯಾಪ್ ಆಗಿರುವಂತೆ ನಾಟಕವಾಡಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಷ್ ಸೇರಿದಂತೆ ಮೂವರನ್ನು ಬಂಧಿಸಿರುವ ಆರ್.ಆರ್.ನಗರ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page