ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
- sathyapathanewsplu
- 2 days ago
- 1 min read

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ದೊರೆತಿದೆ. ಪೊಲೀಸರ ತನಿಖೆಯಲ್ಲಿ ಅಪಹರಣ ಯತ್ನವೆಂಬ ಆರೋಪ ಸುಳ್ಳು ಎಂಬುದು ಬಹಿರಂಗವಾಗಿದ್ದು, ಕಾಲೇಜಿಗೆ ಸೇರಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿನಿಯೇ ಸಿನಿಮೀಯ ಮಾದರಿಯ ನಕಲಿ ಕಥೆ ಕಟ್ಟಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.
ಫೆಬ್ರವರಿ 9ರಂದು ಬೆಳಗ್ಗೆ 8.30ರ ಸುಮಾರಿಗೆ ಬೆಳ್ತಂಗಡಿ ನಗರದ ಸುದೇಮುಗೇರು ಪ್ರದೇಶದಲ್ಲಿ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ಮಾಸ್ಕಧಾರಿಗಳು ಚೂರಿ ತೋರಿಸಿ ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ಕೈಗೆ ಚೂರಿಯಿಂದ ಗಾಯ ಮಾಡಿ ಪರಾರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ಗಾಯಗೊಂಡಿದ್ದ ಕಾರಣ ಆಕೆಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಘಟನೆ ಬೆಳ್ತಂಗಡಿ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪಹರಣ ಯತ್ನ ಪ್ರಕರಣ ಎಂದು ದಾಖಲಾಗಿದ್ದರಿಂದ ಪೊಲೀಸರು ಇಡೀ ದಿನ ಶೋಧ ಕಾರ್ಯಾಚರಣೆ ನಡೆಸಿದ್ದರು.
ಆದರೆ ತನಿಖೆ ಮುಂದುವರಿದಂತೆ ಪ್ರಕರಣದಲ್ಲಿ ಅನುಮಾನಗಳು ಮೂಡಲಾರಂಭಿಸಿದವು. ಸಿಸಿಟಿವಿ ದೃಶ್ಯಾವಳಿ, ಸ್ಥಳ ಪರಿಶೀಲನೆ ಹಾಗೂ ವಿದ್ಯಾರ್ಥಿನಿಯ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಪುನಃ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ವಿದ್ಯಾರ್ಥಿನಿಯೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮನೆಯವರು ಮಂಗಳೂರಿನ ಕಾಲೇಜಿಗೆ ಸೇರಿಸಲು ಒಪ್ಪದೆ ಇದ್ದ ಕಾರಣ, ಕಿಡ್ನಾಪ್ ಯತ್ನದ ನಾಟಕ ಮಾಡಿದರೆ ಒತ್ತಡ ಬರುತ್ತದೆ ಎಂಬ ಲೆಕ್ಕಾಚಾರದಿಂದ ಈ ಸುಳ್ಳು ಕಥೆ ಕಟ್ಟಿಕೊಂಡಿದ್ದಾಗಿ ಪೊಲೀಸರ ಮುಂದೆ ಸತ್ಯ ಬಾಯ್ದಿಟ್ಟಿದ್ದಾಳೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ತಾನೇ ಕೈಗೆ ಗಾಯ ಮಾಡಿಕೊಂಡು ಅಪಹರಣ ಯತ್ನವಾಗಿದೆ ಎಂಬಂತೆ ಸುಳ್ಳು ದೂರು ನೀಡಿದ್ದಳು. ಈ ಪ್ರಕರಣದಲ್ಲಿ ಯಾವುದೇ ಅಪಹರಣ ಯತ್ನ ಅಥವಾ ದುಷ್ಕರ್ಮಿಗಳ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ.






Comments