ಬೆಂಗಳೂರು-ಮಂಗಳೂರು ವಂದೇ ಭಾರತ್: ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ

ಕರ್ನಾಟಕದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಕಠಿಣ ಘಾಟ್ ವಿಭಾಗದಲ್ಲಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಸಂಚಾರ ನಡೆಯುವ ಸಾಧ್ಯತೆಯಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಘಾಟಿ ಪ್ರದೇಶದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಇದಕ್ಕಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ರೈಲಿಗೆ ವಿಶೇಷ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಮುಂದಿನ ವಾರ ರೈಲು ರಾಜ್ಯಕ್ಕೆ ಆಗಮಿಸಲಿದೆ.
ಈಗಾಗಲೇ ವಿದ್ಯುದೀಕರಣಗೊಂಡಿರುವ ಈ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದರೆ, ರೈಲ್ವೆ ಸಚಿವಾಲಯದಿಂದ ಹಸಿರು ನಿಶಾನೆ ಸಿಗಲಿದೆ. ಇದು ಕರಾವಳಿ ಜನರಿಗೆ ಬೆಂಗಳೂರಿಗೆ ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣದ ಭಾಗ್ಯವನ್ನು ಕಲ್ಪಿಸಲಿದೆ.







Comments