ಬಳ್ಳಾರಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದಲೇ ಮಾರಣಾಂತಿಕ ಹಲ್ಲೆ, ಓರ್ವ ಬಾಲಕ ಸಾವು
- Mar 9
- 1 min read

ಬಳ್ಳಾರಿಯ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. 9ನೇ ತರಗತಿಯ ವಿದ್ಯಾರ್ಥಿಯೊಬ್ಬ ವಾರ್ಡನ್ ಸೇರಿದಂತೆ ಸಹಪಾಠಿಗಳ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಬಾಲಕ ಸದ್ಯ ಪರಾರಿಯಾಗಿದ್ದಾನೆ.

ಘಟನೆಯು ಪೋಷಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ವಿದ್ಯಾರ್ಥಿಯು ರಾಡ್‌ನಿಂದ ಹೊಡೆದಿದ್ದಾನೆ ಎಂದು ಮಂಡಳಿ ಹೇಳುತ್ತಿದ್ದರೂ, ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ಮಂದಿಯ ಮೇಲೆ ಒಬ್ಬನೇ ಹಲ್ಲೆ ನಡೆಸಲು ಹೇಗೆ ಸಾಧ್ಯ? ಆತ ಮಾದಕ ವ್ಯಸನಿಯಾಗಿದ್ದನೇ ಅಥವಾ ಮಾನಸಿಕ ಸಮಸ್ಯೆ ಹೊಂದಿದ್ದನೇ ಎಂಬ ಪ್ರಶ್ನೆಗಳು ಎದ್ದಿವೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸುರಕ್ಷಿತವಾಗಿರಬೇಕಾದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಕೈಗೆ ಮಾರಕಾಸ್ತ್ರ ಸಿಕ್ಕಿದ್ದು ಹೇಗೆ ಎಂಬುದು ಈಗ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲಾ ಆಡಳಿತದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.







Comments