ಬಜತ್ತೂರು: ಅನಧಿಕೃತ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಮೂವರ ಬಂಧನ
- Mar 5
- 1 min read

ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕದ ಮೇಲೆ ಉಪ್ಪಿನಂಗಡಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಮಾರ್ಚ್ 3ರಂದು ಗಸ್ತು ನಿರತವಾಗಿದ್ದ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಕೋಳಿಗಳ ಕೂಗಿನ ಸದ್ದನ್ನಾಧರಿಸಿ ಸ್ಥಳಕ್ಕೆ ತೆರಳಿದಾಗ ಜೂಜಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಈ ದಾಳಿಯಲ್ಲಿ ಸತೀಶ್, ಮುರಳಿ ಮತ್ತು ಮೋನಪ್ಪ ಕೆ. ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಸ್ಥಳದಿಂದ ಐದು ಹುಂಜಗಳು, ಕೋಳಿ ಕಾಲುಗಳಿಗೆ ಕಟ್ಟುವ ಚೂರಿಗಳು, 2,300 ರೂ. ನಗದು ಹಾಗೂ ಒಂದು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡು ಅಂಕದಲ್ಲಿದ್ದ ಇತರರು ಪರಾರಿಯಾಗಿದ್ದಾರೆ.
ವಿಚಾರಣೆ ವೇಳೆ ದೇರಣ್ಣ ಮತ್ತು ಉಮೇಶ್ ಎಂಬುವವರು ಈ ಅಂಕವನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







Comments