ಬೆಂಗಳೂರು: ಎಟಿಎಂಗೆ ಹಣ ತುಂಬುವ ನೆಪದಲ್ಲಿ ಒಂದು ಕೋಟಿಗೂ ಅಧಿಕ ನಗದಿನೊಂದಿಗೆ ಸಿಬ್ಬಂದಿ ಪರಾರಿ

ಬೆಂಗಳೂರು: ನಗರದ ಎಟಿಎಂಗಳಿಗೆ ನಗದು ಠೇವಣಿ ಮಾಡುವ ಜವಾಬ್ದಾರಿ ಹೊತ್ತಿದ್ದ ಖಾಸಗಿ ಕಂಪನಿಯ ಸಿಬ್ಬಂದಿಯೇ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ದೋಚಿ ಪರಾರಿಯಾದ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಬ್ಬಂದಿಗಳು ಆ್ಯಕ್ಸಿಸ್ ಬ್ಯಾಂಕ್‌ನ ಎಟಿಎಂಗಳಿಗೆ ಜಮಾ ಮಾಡಬೇಕಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದಾರೆ. ನಗರದಲ್ಲಿ ಇತ್ತೀಚೆಗಷ್ಟೇ 400 ಕೋಟಿ ರೂಪಾಯಿ ದರೋಡೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಜನವರಿ 19ರಂದು ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ಕಂಪನಿಯು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿತ್ತು. ಪ್ರವೀಣ್, ಧನಶೇಖರ್, ರಾಮಕ್ಕ ಸೇರಿದಂತೆ ಒಟ್ಟು ಆರು ಮಂದಿ ಸಿಬ್ಬಂದಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಆದರೆ, ಆರೋಪಿಗಳು ಎಟಿಎಂಗಳಿಗೆ ಹಣ ಜಮಾ ಮಾಡದೆ ನಗದಿನೊಂದಿಗೆ ಪರಾರಿಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಒಂದು ತಂಡವು 57 ಲಕ್ಷ ರೂಪಾಯಿ ಹಾಗೂ ಮತ್ತೊಂದು ತಂಡವು ಸುಮಾರು 80 ಲಕ್ಷ ರೂಪಾಯಿ ಮೊತ್ತದೊಂದಿಗೆ ಕಣ್ಮರೆಯಾಗಿದ್ದು, ಒಟ್ಟು ನಷ್ಟದ ಮೊತ್ತ ಒಂದು ಕೋಟಿ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ.
ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದನ್ನು ಗಮನಿಸಿದ ಕಂಪನಿಯ ಅಧಿಕಾರಿ ಮಿಥುನ್ ಅವರು ಆಂತರಿಕ ಪರಿಶೀಲನೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಕೋರಮಂಗಲ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕೃತ್ಯವು ಖಾಸಗಿ ನಗದು ನಿರ್ವಹಣಾ ಸಂಸ್ಥೆಗಳ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







Comments