ಬಿ.ಸಿ.ರೋಡ್ ಲಾವಣ್ಯ ಹತ್ಯೆ ಪ್ರಕರಣ: ಆರೋಪಿ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘಕ್ಕೆ ವಿಎಚ್‌ಪಿ, ಬಜರಂಗದಳ ಮನವಿ

ಇಲ್ಲಿನ ಬಿ.ಸಿ.ರೋಡ್‌ನಲ್ಲಿ ಜುಲೈ 16ರಂದು ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಚೇತನ್ ಪರವಾಗಿ ಯಾವುದೇ ನ್ಯಾಯವಾದಿಗಳು ಕೋರ್ಟ್‌ನಲ್ಲಿ ವಕಾಲತ್ತು ವಹಿಸಬಾರದು ಎಂದು ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬಂಟ್ವಾಳ ವಕೀಲರ ಸಂಘಕ್ಕೆ ಮಹತ್ವದ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ವಕೀಲರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಸಲ್ಲಿಸಿದ ಈ ಮನವಿಯಲ್ಲಿ, ಲಾವಣ್ಯ ಅವರ ಕೊಲೆ ಅತ್ಯಂತ ಕ್ರೂರ, ಅಮಾನುಷ ಮತ್ತು ಭೀಕರ ಕೃತ್ಯವಾಗಿದೆ. ಈ ಘಟನೆಯು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ನಾಗರಿಕರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಸಂಘಟನೆಗಳ ಪ್ರಮುಖರು ಉಲ್ಲೇಖಿಸಿದ್ದಾರೆ. ಸಮಾಜಕ್ಕೆ ಮಾರಕವಾಗಿರುವ ಇಂತಹ ಘೋರ ಕೃತ್ಯ ಎಸಗಿದ ಆರೋಪಿಗೆ ಯಾವುದೇ ಕಾನೂನು ಬೆಂಬಲ ಸಿಗಬಾರದು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ಪ್ರಮುಖ ಪದಾಧಿಕಾರಿಗಳು ಹಾಗೂ ಪುತ್ತೂರು ಜಿಲ್ಲಾ ಮಟ್ಟದ ಹಿರಿಯ ಪ್ರಮುಖರು ಉಪಸ್ಥಿತರಿದ್ದು, ನ್ಯಾಯವಾದಿಗಳಲ್ಲಿ ಈ ಕುರಿತು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸಿಕೊಂಡರು. ಪ್ರಕರಣದ ತನಿಖೆ ಚುರುಕಾಗಿ ನಡೆದು, ನೊಂದ ಕುಟುಂಬಕ್ಕೆ ಶೀಘ್ರ ನ್ಯಾಯ ಸಿಗಬೇಕೆಂದು ಈ ವೇಳೆ ಒತ್ತಾಯಿಸಲಾಯಿತು.







Comments