ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಅಕ್ಷಯ್ ಕಲ್ಲೇಗ ಕೊಲೆ ಕೇಸ್‌ನಲ್ಲಿ ಬಿಗ್ ಅಪ್‌ಡೇಟ್

ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, 3ನೇ ಮತ್ತು 4ನೇ ಆರೋಪಿಗಳಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥರಾಗಿದ್ದ ಅಕ್ಷಯ್ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಂಜುನಾಥ್ ಶೆಣೈ ಮತ್ತು ಕೇಶವ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಿಡುಗಡೆಯ ಆದೇಶ ನೀಡಿದೆ.

2023ರ ನವೆಂಬರ್ 6ರಂದು ನೆಹರು ನಗರದಲ್ಲಿ ಅಕ್ಷಯ್ ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಈಗ ಬಿಡುಗಡೆಯಾಗಿರುವ ಆರೋಪಿಗಳ ಪರವಾಗಿ ಹಿರಿಯ ವಕೀಲ ನರಸಿಂಹ ಪ್ರಸಾದ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಸರಿತಾ ಡಿ. ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಜಾಮೀನು ಪಡೆದ ಆರೋಪಿಗಳಿಗೆ ನ್ಯಾಯಾಲಯವು ಕಠಿಣ ಷರತ್ತುಗಳನ್ನು ವಿಧಿಸಿದೆ. ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸುವುದು, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಹಾಗೂ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಸದ್ಯ ಇಬ್ಬರು ಆರೋಪಿಗಳು ಜೈಲಿನಿಂದ ಹೊರಬರಲಿದ್ದಾರೆ.







Comments