ರೈತರಿಗೆ ಸಿಹಿ ಸುದ್ದಿ-ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಪೂರೈಕೆ; ಆತಂಕ ಬೇಡ ಎಂದ ಕೃಷಿ ಸಚಿವರು
- sathyapathanewsplu
- 2 days ago
- 1 min read

ರಾಜ್ಯದ ರೈತರಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಸಿಹಿ ಸುದ್ದಿ ನೀಡಿದ್ದು, ಪ್ರಸ್ತುತ ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆಯಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ. ಕಳೆದ ವರ್ಷದ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಕಂಡುಬಂದಿದ್ದ ಅಲ್ಪಪ್ರಮಾಣದ ಅಭಾವವನ್ನು ಸರಿಪಡಿಸಲಾಗಿದ್ದು, ಈಗ ರೈತರ ಬೇಡಿಕೆಗೆ ಅನುಗುಣವಾಗಿ ಸಮರ್ಪಕ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
2025-26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು, ಒಟ್ಟು 18.21 ಲಕ್ಷ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆಯ ಎದುರು, ಈಗಾಗಲೇ 21.89 ಲಕ್ಷ ಮೆಟ್ರಿಕ್ ಟನ್ ಸರಬರಾಜಾಗಿದೆ ಎಂದು ತಿಳಿಸಿದರು. ಇದರಲ್ಲಿ ಸುಮಾರು 11.71 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದ್ದು, ಉಳಿದ 10.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿದೆ.
ಕೇಂದ್ರ ಸರ್ಕಾರದಿಂದ ರಸಗೊಬ್ಬರ ಪೂರೈಕೆ ಸುಗಮವಾಗಿ ನಡೆಯುತ್ತಿದ್ದು, ರೈತರು ಅಭಾವದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು. ಕೃಷಿ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ದಾಸ್ತಾನು ನಿರ್ವಹಣೆಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.






Comments