26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ: ಧರ್ಮಸ್ಥಳದಲ್ಲಿ ನಡೆದ ಅಪರೂಪದ ಪುನರ್ಮಿಲನ!
- Jun 12
- 1 min read

ಹೆತ್ತ ಕರುಳಿನ ತೀವ್ರ ಹಂಬಲ ಹಾಗೂ ಪ್ರಾರ್ಥನೆಗೆ ಕೊನೆಗೂ ಜಯ ಸಿಕ್ಕಿದೆ. "ಕಣ್ಣು ಮುಚ್ಚುವ ಮುನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು" ಎಂಬ ವೃದ್ಧ ತಾಯಿಯ ಕಣ್ಣೀರಿನ ಕರೆಗೆ ಭಗವಂತ ಓಗೊಟ್ಟಿದ್ದಾನೆ. ಬರೋಬ್ಬರಿ 26 ವರ್ಷಗಳ ಹಿಂದೆ, ಕೇವಲ 12 ವರ್ಷದ ಬಾಲಕನಾಗಿದ್ದಾಗ ನಾಪತ್ತೆಯಾಗಿದ್ದ ಮಗ, ಇದೀಗ ಮಹಾರಾಷ್ಟ್ರದ ‘ಸಲೀಂ’ ಆಗಿ ಸ್ವಂತ ಮನೆಗೆ ಮರಳಿ ಬಂದಿರುವ ವಿಸ್ಮಯಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಇಷ್ಟು ವರ್ಷಗಳ ಬಳಿಕ ಮರಳಿ ಬಂದು ಹೆತ್ತ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ತರಿಸಿದ ಮಗ. ಕಳೆದ 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಸರ್ಕಸ್ ತಂಡವೊಂದು ಬಂದಿತ್ತು. ಆಗ ಬಾಲಕನಾಗಿದ್ದ ಸತೀಶ್, ಸರ್ಕಸ್‌ನ ಆಕರ್ಷಣೆಗೆ ಒಳಗಾಗಿ ಯಾರಿಗೂ ತಿಳಿಸದೆ ಆ ತಂಡದ ಜೊತೆ ಓಡಿಹೋಗಿದ್ದ. ಸರ್ಕಸ್ ತಂಡದೊಂದಿಗೆ ದೇಶದ ವಿವಿಧೆಡೆ ಸುತ್ತಾಡಿದ ಈತ, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ.
ನಿರಂತರ ದುಡಿಮೆ ಮತ್ತು ಸುದೀರ್ಘ ಕಾಲದ ಪ್ರತ್ಯೇಕತೆಯಿಂದಾಗಿ ಸತೀಶ್‌ಗೆ ತನ್ನ ಸ್ವಂತ ಊರು, ಹೆತ್ತವರು ಮತ್ತು ಮಾತೃಭಾಷೆಯ ನೆನಪೇ ಸಂಪೂರ್ಣವಾಗಿ ಅಳಿಸಿಹೋಗಿತ್ತು. ಮಹಾರಾಷ್ಟ್ರದಲ್ಲಿದ್ದ ಅವಧಿಯಲ್ಲಿ ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲಿಯೇ ತಾಲೀಮಾ ಎಂಬಾಕೆಯನ್ನು ವಿವಾಹವಾಗಿ, ಪ್ರಸ್ತುತ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳೊಂದಿಗೆ ಸಂಸಾರ ಹೂಡಿದ್ದಾನೆ. ಹೊರರಾಜ್ಯದಲ್ಲೇ ನೆಲೆಸಿದ್ದರಿಂದ ಆತನಿಗೆ ಕನ್ನಡ ಮತ್ತು ತುಳು ಸಂಪೂರ್ಣ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಮಾತ್ರ ಮಾತನಾಡಬಲ್ಲವನಾಗಿದ್ದಾನೆ.
ಜೂನ್ 9 ರಂದು ಸಲೀಂ (ಸತೀಶ್) ತನ್ನ ಮಹಾರಾಷ್ಟ್ರದ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಕಾಕತಾಳೀಯ ಎಂಬಂತೆ, ಹಿಂದೆ ತಾನು ಓಡಿಹೋಗಿದ್ದ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. "ಇದೇ ನನ್ನ ಸ್ವಂತ ಊರು" ಎಂದು ಮನವರಿಕೆಯಾಗುತ್ತಿದ್ದಂತೆ, ಆತನಿಗೆ ತನ್ನ ತಮ್ಮಂದಿರ ಹೆಸರುಗಳು ನೆನಪಿಗೆ ಬಂದಿವೆ. ತಕ್ಷಣವೇ ಸ್ಥಳೀಯ ಅಂಗಡಿಯೊಂದರ ಬಳಿ ಆ ಹೆಸರುಗಳನ್ನು ಹೇಳಿ ವಿಚಾರಿಸಿದಾಗ, ಕೊನೆಗೂ ತನ್ನ ಹಳೆಯ ಮನೆಯ ವಿಳಾಸ ಸಿಕ್ಕಿದೆ.
ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲು ಸಾಧ್ಯವಾಗಲಿಲ್ಲ. ಸತೀಶ್‌ಗೆ ಹಿಂದಿ ಮಾತ್ರ ಬರುತ್ತಿದ್ದು, ತಾಯಿಗೆ ಹಿಂದಿ ಗೊತ್ತಿಲ್ಲದಿದ್ದರೂ ಭಾವನೆಗಳಿಗೆ ಭಾಷೆಯ ಹಂಗಿರಲಿಲ್ಲ. ತಾಯಿ ಮತ್ತು ಸಹೋದರರನ್ನು ಸತೀಶ್ ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಾಯಿ ಮಗನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದರು, ಹೆತ್ತ ಕರುಳಿನ ಹಂಬಲವೇ ಮಗನನ್ನು ಎಳೆದು ತಂದಿದೆ ಎಂದು ಸ್ಥಳೀಯರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕುಟುಂಬದೊಂದಿಗೆ ಕೆಲವು ದಿನ ಕಳೆದ ಸತೀಶ್, ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದು, ಈ ಪುನರ್ಮಿಲನ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.







Comments