;
top of page

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್‌ಪಾಟ್!

  • Feb 5
  • 1 min read

ಅಬುಧಾಬಿಯ ಪ್ರತಿಷ್ಠಿತ 'ಬಿಗ್ ಟಿಕೆಟ್' ಲಾಟರಿಯಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಕೋಟ್ಯಂತರ ರೂಪಾಯಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಮಸ್ಕತ್‌ನಲ್ಲಿ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಶೆಟ್ಟಿಗಾರ್ ಅವರು ಬರೋಬ್ಬರಿ 49 ಕೋಟಿ ರೂಪಾಯಿ (20 ಮಿಲಿಯನ್ ದಿರಮ್) ಬಹುಮಾನ ಗೆದ್ದ ಅದೃಷ್ಟವಂತ ಕನ್ನಡಿಗ. ಫೆಬ್ರವರಿ 3ರಂದು ನಡೆದ ಲಾಟರಿ ಡ್ರಾದಲ್ಲಿ ಶಂತನು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ಈ ಬೃಹತ್ ಮೊತ್ತ ಒಲಿದಿದೆ.

ವಿಶೇಷವೆಂದರೆ, ಶಂತನು ಈ ಟಿಕೆಟನ್ನು ತನ್ನ ಸ್ನೇಹಿತನೊಂದಿಗೆ ಜಂಟಿಯಾಗಿ ಖರೀದಿಸಿದ್ದರು. ಹೀಗಾಗಿ ಲಾಟರಿ ನಿಯಮದಂತೆ ಒಟ್ಟು ಬಹುಮಾನದ ಮೊತ್ತದಲ್ಲಿ ಅರ್ಧದಷ್ಟು ಅಂದರೆ ಸುಮಾರು 24.5 ಕೋಟಿ ರೂಪಾಯಿ ಶಂತನು ಪಾಲಾಗಲಿದ್ದು, ಉಳಿದ ಅರ್ಧ ಭಾಗ ಅವರ ಸ್ನೇಹಿತನಿಗೆ ಸಿಗಲಿದೆ. 2021ರಿಂದಲೂ ಸತತವಾಗಿ ಬಿಗ್ ಟಿಕೆಟ್ ಡ್ರಾದಲ್ಲಿ ಭಾಗವಹಿಸುತ್ತಿದ್ದ ಶಂತನು ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಡ್ರಾ ಫಲಿತಾಂಶದ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಈ ಗೆಲುವು ತಮಗೆ ಅತೀವ ಸಂತಸ ತಂದಿದ್ದು, ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬೃಹತ್ ಮೊತ್ತವನ್ನು ಹೇಗೆ ಬಳಸಬೇಕೆಂಬ ಬಗ್ಗೆ ಶಂತನು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. 1992ರಲ್ಲಿ ಯುಎಇನಲ್ಲಿ ಆರಂಭವಾದ 'ಬಿಗ್ ಟಿಕೆಟ್' ಲಾಟರಿಯು ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರ ಬದುಕನ್ನು ಬದಲಿಸಿದೆ. ಆರಂಭದಲ್ಲಿ ಕೇವಲ 2 ಕೋಟಿ ರೂಪಾಯಿಯಿಂದ ಶುರುವಾದ ಈ ಡ್ರಾ, ಇದೀಗ 49 ಕೋಟಿ ರೂಪಾಯಿಯಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು, ವಿಶೇಷವಾಗಿ ಕನ್ನಡಿಗರು ವಿದೇಶಿ ಲಾಟರಿಗಳಲ್ಲಿ ಇಂತಹ ದೊಡ್ಡ ಮೊತ್ತವನ್ನು ಗೆಲ್ಲುತ್ತಿರುವುದು ವಿಶೇಷವಾಗಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page