ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಮರುಪರೀಕ್ಷೆ ಬರೆಯಲು ಇನ್ನು ಎರಡೇ ವರ್ಷ ಅವಕಾಶ!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಮತ್ತು ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾತ್ರ ಮರುಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಈ ಎರಡು ವರ್ಷಗಳ ಕಾಲಮಿತಿಯ ನಂತರ ಪರೀಕ್ಷೆ ಬರೆಯುವ ಹಕ್ಕನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಲಿದ್ದಾರೆ.
ಪ್ರಸ್ತುತ ವರ್ಷಕ್ಕೆ ಮೂರು ಪರೀಕ್ಷೆಗಳಂತೆ (Exam 1, 2, 3) ಎರಡು ವರ್ಷಗಳಲ್ಲಿ ಒಟ್ಟು ಆರು ಅವಕಾಶಗಳು ಸಿಗಲಿವೆ. ಈ ಹಿಂದೆ ಆರು ಬಾರಿ ಪರೀಕ್ಷೆ ಬರೆಯಲು ಯಾವುದೇ ಕಾಲಮಿತಿ ಇರಲಿಲ್ಲ. ಆದರೆ, ಹಲವು ವರ್ಷಗಳ ನಂತರವೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ ಅಂಕಪಟ್ಟಿ ನಿರ್ವಹಣೆ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯ ಶಿಫಾರಸಿನ ಮೇರೆಗೆ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮವು ರೆಗ್ಯುಲರ್, ಖಾಸಗಿ ಹಾಗೂ ಪುನರಾವರ್ತಿತ (Repeaters) ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ಇದರಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟ ಅವಧಿಯೊಳಗೆ ತಮ್ಮ ಶಿಕ್ಷಣ ಪೂರೈಸಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳೆಯ ಅಂಕಪಟ್ಟಿಗಳ ಗೊಂದಲ ನಿವಾರಿಸಲು ಈ ನಿರ್ಧಾರ ಸಹಕಾರಿಯಾಗಲಿದೆ.







Comments