19 ಜಿಲ್ಲೆಗಳ ವಿದ್ಯುತ್ ವಿತರಣಾ ಪರವಾನಗಿ ಅರ್ಜಿ ಹಿಂಪಡೆದ ಟಾಟಾ ಪವರ್!
- Jul 4
- 1 min read

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದೆ ಟಾಟಾ ಪವರ್ ಕಂಪೆನಿಯು ಸಲ್ಲಿಸಿದ್ದ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದ ‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದೆ. ಖಾಸಗೀಕರಣದ ವಿರುದ್ಧ ನಿರಂತರವಾಗಿ ದನಿಯೆತ್ತಿದ್ದ ಕಾರ್ಮಿಕ ಮತ್ತು ಜನಪರ ಸಂಘಟನೆಗಳು ಈ ಬೆಳವಣಿಗೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದು, ಇದು ಸಾರ್ವಜನಿಕರ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಜಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಬಣ್ಣಿಸಿದೆ.
ಶುಕ್ರವಾರ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ ಟಿ., ಆಯೋಗದ ಕಲಾಪದ ವೇಳೆ ಟಾಟಾ ಪವರ್ ಕಂಪೆನಿಯ ಪ್ರತಿನಿಧಿಯೇ ತಾವಾಗಿಯೇ ಅರ್ಜಿಯನ್ನು ಹಿಂಪಡೆಯುವ ಮನವಿ ಸಲ್ಲಿಸಿದರು ಎಂದು ಕೆಇಆರ್‌ಸಿ ಮೂಲಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಇದೇ ವೇಳೆ ವಿಚಾರಣೆ ನಡೆಸುತ್ತಿದ್ದ ಆಯೋಗವು ಟಾಟಾ ಪವರ್ ಸಲ್ಲಿಸಿದ್ದ ಅರ್ಜಿಯಲ್ಲಿ ಕೆಲವೊಂದು ಗಂಭೀರ ಲೋಪದೋಷಗಳು ಇರುವುದನ್ನು ಪತ್ತೆಹಚ್ಚಿ ಗಮನ ಸೆಳೆದಿತ್ತು. ತದನಂತರ ಕಂಪೆನಿಯು ಸಲ್ಲಿಸಿದ ಅರ್ಜಿ ಹಿಂಪಡೆಯುವಿಕೆಯ ಮನವಿಯನ್ನು ಆಯೋಗವು ಪುರಸ್ಕರಿಸಿ, ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.
ಟಾಟಾ ಕಂಪೆನಿಗೆ ಈ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಎಡಪಕ್ಷಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ವಿದ್ಯುತ್ ಖಾಸಗೀಕರಣದ ವಿರುದ್ಧ ಬೃಹತ್ ಸಮಾವೇಶಗಳನ್ನು ನಡೆಸಿ ಜನಜಾಗೃತಿ ಮೂಡಿಸಿದ್ದವು. ಅಲ್ಲದೆ, ರಾಜ್ಯದ ಪ್ರತಿಯೊಬ್ಬ ನಾಗರಿಕರೂ ಈ ಪ್ರಸ್ತಾವನೆಯ ವಿರುದ್ಧ ಆಕ್ಷೇಪಣೆ ಸಲ್ಲಿಸುವಂತೆ ವ್ಯಾಪಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಐತಿಹಾಸಿಕ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್, ಸಾರ್ವಜನಿಕ ವಲಯದಿಂದ ವ್ಯಕ್ತವಾದ ತೀವ್ರ ಪ್ರತಿರೋಧ ಮತ್ತು ವಿವಿಧ ಸಂಘಟನೆಗಳ ಸಂಘಟಿತ ಪ್ರಯತ್ನವೇ ಟಾಟಾ ಪವರ್ ಕಂಪೆನಿಯು ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದೆ.







Comments