ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಕಿಡಿ: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ–ಜೆಡಿಎಸ್ ವಾಗ್ದಾಳಿ
- Apr 24
- 1 min read

ಖರ್ಗೆ ಹೇಳಿಕೆಗಳ ವಿರುದ್ಧ ಬಿಜೆಪಿ ಆಕ್ರೋಶ; “ಸ್ವಂತ ಜಿಲ್ಲೆ ಅಭಿವೃದ್ಧಿಗೆ ಗಮನಕೊಡಿ” ಎಂದು ಟೀಕೆ
ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇ.98.40 ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ.98.18 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ.

ಇದೇ ವೇಳೆ, ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
ಬಿಜೆಪಿ ತನ್ನ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ, “ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ ಟ್ವೀಟ್ ಮಾಡಿ; ಎಲ್ಲಿದ್ದೀರಿ ಮಹಾಜ್ಞಾನಿ ಪ್ರಿಯಾಂಕ್ ಖರ್ಗೆ ಅವರೇ?” ಎಂದು ಪ್ರಶ್ನಿಸಿದೆ.
ಇನ್ನೊಂದೆಡೆ ಜೆಡಿಎಸ್ ಕೂಡ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರಗಿ ಜಿಲ್ಲೆ ನಿರಂತರವಾಗಿ ಹಿನ್ನಡೆಯಲ್ಲಿರುವುದನ್ನು ಉಲ್ಲೇಖಿಸಿದೆ. “ಹಿಂದಿನ ಸಾಲಿನಲ್ಲಿ 34ನೇ ಸ್ಥಾನದಲ್ಲಿದ್ದ ಕಲಬುರಗಿ ಈ ಬಾರಿ 35ನೇ ಸ್ಥಾನಕ್ಕೆ ಕುಸಿದಿದೆ. ಹಲವು ದಶಕಗಳಿಂದ ಜಿಲ್ಲೆಯ ಆಡಳಿತ ನಡೆಸುತ್ತಿರುವ ಖರ್ಗೆ ಕುಟುಂಬ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿದೆ,” ಎಂದು ಟೀಕಿಸಿದೆ.
ಅಲ್ಲದೆ, ಜಿಲ್ಲೆಯಲ್ಲಿ ಶೈಕ್ಷಣಿಕ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಜೆಡಿಎಸ್ ಆರೋಪಿಸಿದೆ. “ಮಾತಿನ ಶೌರ್ಯವನ್ನು ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ,” ಎಂದು ಸವಾಲು ಹಾಕಿದ್ದು, ವ್ಯಂಗ್ಯವಾಗಿ ‘ನಾಟಿಕೋಳಿ ಮಿನಿಸ್ಟರ್’ ಎಂದೂ ಟೀಕಿಸಿದೆ.







Comments