SSLC ಹಿಂದಿ ವಿಷಯಕ್ಕೆ ಅಂಕ ಕಡ್ಡಾಯ: ಗ್ರೇಡ್ ವ್ಯವಸ್ಥೆಗೆ ಹೈಕೋರ್ಟ್ ತಡೆ

ಬೆಂಗಳೂರು, ಏಪ್ರಿಲ್ 21: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ನೀಡಿದ್ದ ಆದೇಶದ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾ. ಇ.ಎಸ್. ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ, ಪರೀಕ್ಷಾ ಅಧಿಸೂಚನೆ ಹೊರಬಿದ್ದ ಬಳಿಕ ನಿಯಮಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂದು ಕಠಿಣವಾಗಿ ಸೂಚಿಸಿದೆ. “ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ” ಎಂದು ಸರ್ಕಾರದ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿಂದಿ ವಿಷಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿನ್ನೆಲೆ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ಪದ್ಧತಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದರು. ಆದರೆ ನ್ಯಾಯಾಲಯ ಇದನ್ನು ಸಮರ್ಥಿಸದೆ, ನಿಯಮ ರೂಪಿಸುವ ಮೊದಲು ಪರೀಕ್ಷಾ ಪದ್ಧತಿ ಬದಲಾವಣೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಸೇರಿದಂತೆ ಮೂವರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯಲ್ಲಿ, ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಗ್ರೇಡಿಂಗ್ ವ್ಯವಸ್ಥೆಯಿಂದ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಅಂಕ ನೀಡುವ ವ್ಯವಸ್ಥೆ ಮುಂದುವರಿಸಲು ಆದೇಶಿಸಿದೆ.
ಇದೇ ವೇಳೆ, ಈ ಆದೇಶವು ಕೇವಲ ಹಿಂದಿ ವಿಷಯಕ್ಕೆ ಮಾತ್ರ ಸೀಮಿತವಾಗದೆ, ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗಳಿಗೂ ಅನ್ವಯವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಳೆದ ಕೆಲವು ವರ್ಷಗಳಿಂದ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸುವ ಪ್ರಯತ್ನ ಶಿಕ್ಷಣ ಇಲಾಖೆಯಿಂದ ನಡೆದಿದ್ದು, ಇದಕ್ಕೆ ಶಿಕ್ಷಕರು ಹಾಗೂ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟ್ ಆದೇಶದಿಂದ ತೃತೀಯ ಭಾಷೆಯ ಮಹತ್ವ ಮತ್ತೊಮ್ಮೆ ಬೆಳಕಿಗೆ ಬಂದಿದೆ.







Comments