ಸಾಮಾಜಿಕ ಜಾಲತಾಣ ಪೋಸ್ಟ್ ದೂರು: ಏಕಾಏಕಿ ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಸಂಬಂಧಿಸಿದ ದೂರುಗಳ ಆಧಾರದ ಮೇಲೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ ಆರೋಪಿಗಳನ್ನು ಏಕಾಏಕಿ ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ (ಡಿಜಿ ಮತ್ತು ಐಜಿಪಿ) ಸ್ಪಷ್ಟ ನಿರ್ದೇಶನ ನೀಡಿದೆ.
ಅಪರಾಧ ಪ್ರಕರಣ ದಾಖಲಾದ ತಕ್ಷಣವೇ ಬಂಧನ ಮಾಡುವುದು ಸರಿಯಲ್ಲ ಎಂದಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಹಾಗೂ ಅನಗತ್ಯ ಬಂಧನ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ನೀಡುವಂತೆ ಸೂಚಿಸಿದೆ.
ಬಂಧನಕ್ಕೂ ಮುನ್ನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್ ನೀಡುವ ನಿಯಮಗಳನ್ನು ಪಾಲಿಸಬೇಕು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಸತೇಂದರ್ ಕುಮಾರ್, ಜೋಗಿಂದರ್ ಕುಮಾರ್ ಮತ್ತು ಅರ್ನೇಶ್ ಕುಮಾರ್ ಪ್ರಕರಣಗಳ ತೀರ್ಪುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಒಂದೇ ಘಟನೆ ಅಥವಾ ಜಾಲತಾಣದ ಒಂದೇ ಪೋಸ್ಟ್‌ಗೆ ಸಂಬಂಧಿಸಿದಂತೆ ಬೇರೆ ಬೇರೆ ದೂರುದಾರರಿಂದ ದೂರುಗಳು ಬಂದರೂ, ಪ್ರತ್ಯೇಕ ಎಫ್‌ಐಆರ್ (FIR) ದಾಖಲಿಸಬಾರದು. ಸರಣಿ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಕಾನೂನು ತತ್ವಗಳನ್ನು ಆಧರಿಸಿ ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಆದರೆ, ಆರೋಪಗಳು ಪ್ರತ್ಯೇಕ ಘಟನೆಯನ್ನು ಪ್ರತಿನಿಧಿಸಿದರೆ ಮಾತ್ರ ಹೊಸ ಪ್ರಕರಣ ದಾಖಲಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ಪೋಸ್ಟ್ ಆಧರಿಸಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವ ವೇಳೆ ಹೈಕೋರ್ಟ್ ಈ ಪ್ರಮುಖ ಆದೇಶ ನೀಡಿದೆ.







Comments