ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಹತ್ಯೆ: ದೇಹ 9 ತುಂಡು, ಸಿಸಿಟಿವಿಯಲ್ಲಿ ಶವ ಸಾಗಿಸಿದ ದೃಶ್ಯ

: ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಅವರ ಹತ್ಯೆ ಪ್ರಕರಣದಲ್ಲಿ ತನಿಖೆಗೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಆಲ್ವಿನ್ ಅವರ ಮೃತದೇಹವನ್ನು ಒಂಬತ್ತು ಭಾಗಗಳಾಗಿ ಬೇರ್ಪಡಿಸಲಾಗಿತ್ತು.
ತನಿಖೆಯ ಭಾಗವಾಗಿ ಪರಿಶೀಲಿಸಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಎರಡು ಚೀಲಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಈ ದೃಶ್ಯಗಳು ಪ್ರಕರಣದ ತನಿಖೆಯಲ್ಲಿ ಪ್ರಮುಖ ಸುಳಿವಾಗಿವೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಲ್ವಿನ್ ಅವರ ಎಡ ಎದೆ ಭಾಗದಲ್ಲಿ ಎರಡು ಚುಚ್ಚಿದ ಗಾಯಗಳಿರುವುದಾಗಿ ಉಲ್ಲೇಖಿಸಲಾಗಿದೆ. ಏಳನೇ ಮತ್ತು ಎಂಟನೇ ಪಕ್ಕೆಲುಬುಗಳ ನಡುವಿನಿಂದ ಗಾಯಗಳಾಗಿವೆ ಎನ್ನಲಾಗಿದೆ. ದೇಹದ ವಿವಿಧ ಭಾಗಗಳನ್ನು ಬೇರ್ಪಡಿಸಲಾಗಿದ್ದು, ಎಲುಬುಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿರುವ ಅಂಶವೂ ವರದಿಯಲ್ಲಿ ದಾಖಲಾಗಿದೆ.
ಇದೇ ವೇಳೆ, ಘಟನೆ ಬಳಿಕ ಆಲ್ವಿನ್ ಅವರ ಪತ್ನಿ ಟೀನಾ ಹಾಗೂ ಪುತ್ರ ಭಾರತಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಆರೋಪಗಳು ತನಿಖೆಯಿಂದ ದೃಢಪಟ್ಟಿಲ್ಲ. ಪ್ರಕರಣದಲ್ಲಿ ಅವರ ಪಾತ್ರವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಆಲ್ವಿನ್ ಅವರ ಮೃತದೇಹವನ್ನು ಶೀಘ್ರವಾಗಿ ಸ್ವಗ್ರಾಮಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಶಾರ್ಜಾ ಪೊಲೀಸರಿಂದ ಮುಂದುವರಿದಿದ್ದು, ಸಿಸಿಟಿವಿ ದೃಶ್ಯಗಳು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಕೊಲೆಯ ಹಿಂದಿನ ಸಂಪೂರ್ಣ ಸತ್ಯವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.







Comments