ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿ ಬಿಡುಗಡೆ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲ ಸ್ಥಾನ, ಚಾಮುಂಡಿ ಬೆಟ್ಟದ ಆದಾಯದಲ್ಲಿ ಕುಸಿತ
- sathyapathanewsplu
- Dec 30, 2025
- 1 min read

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ 'ಎ' ಗ್ರೇಡ್ ದೇವಾಲಯಗಳ ಆದಾಯ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಸತತವಾಗಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 2023-24ರಲ್ಲಿ 146.01 ಕೋಟಿ ಇದ್ದ ಕುಕ್ಕೆ ದೇಗುಲದ ಆದಾಯವು 2024-25ರ ಅವಧಿಯಲ್ಲಿ 155.95 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ರಾಜ್ಯದ ಟಾಪ್ 10 ಶ್ರೀಮಂತ ದೇವಾಲಯಗಳ ಪೈಕಿ ಕರಾವಳಿ ಭಾಗದ ಕುಕ್ಕೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳು ಪ್ರಮುಖ ಸ್ಥಾನಗಳನ್ನು ಪಡೆಯುವ ಮೂಲಕ ಕರಾವಳಿ ದೇಗುಲಗಳ ಪಾರಮ್ಯ ಮೆರೆದಿವೆ.
ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಲ್ಲೂರು ಮೂಕಾಂಬಿಕೆ ದೇಗುಲದ ಆದಾಯವು 63.23 ಕೋಟಿಯಿಂದ 71.93 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ನಂಜನಗೂಡು ಶ್ರೀಕಂಠೇಶ್ವರ, ಸವದತ್ತಿ ಯಲ್ಲಮ್ಮ ಮತ್ತು ಹುಲಿಗಿಯ ಹುಲಿಗೆಮ್ಮ ದೇವಾಲಯಗಳ ಆದಾಯದಲ್ಲೂ ಗಣನೀಯ ಪ್ರಗತಿ ಕಂಡುಬಂದಿದೆ. ಆದರೆ, ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆದಾಯದಲ್ಲಿ ಈ ಬಾರಿ ಇಳಿಕೆಯಾಗಿದ್ದು, ಕಳೆದ ವರ್ಷದ 56.67 ಕೋಟಿಯಿಂದ 50.68 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಅದೇ ರೀತಿ ಯಡಿಯೂರು ಸಿದ್ಧಲಿಂಗೇಶ್ವರ ಮತ್ತು ಬೆಂಗಳೂರಿನ ಬನಶಂಕರಿ ದೇವಾಲಯಗಳ ಆದಾಯದಲ್ಲೂ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ರಾಜ್ಯದಲ್ಲಿ 'ಶಕ್ತಿ' ಯೋಜನೆ ಜಾರಿಯಾದ ಬಳಿಕ ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 10 ರಿಂದ 15 ರಷ್ಟು ಏರಿಕೆ ದಾಖಲಾಗಿರುವುದು ಈ ಆದಾಯ ವೃದ್ಧಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಪ್ರಸ್ತುತ ವರ್ಷಾಂತ್ಯದ ರಜೆಗಳು, ಕ್ರಿಸ್ಮಸ್ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಧರ್ಮಸ್ಥಳ, ಕುಕ್ಕೆ, ಕಟೀಲು ಸೇರಿದಂತೆ ಕರಾವಳಿಯ ಬಹುತೇಕ ಪುಣ್ಯಕ್ಷೇತ್ರಗಳಲ್ಲಿ ಭಕ್ತಾದಿಗಳ ದಟ್ಟಣೆ ವಿಪರೀತವಾಗಿದ್ದು, ಬೀಚ್‌ಗಳು ಮತ್ತು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.






Comments