MRPL ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

ಮಂಗಳೂರು: ಸೆಪ್ಟೆಂಬರ್ 30ರಂದು ಮಂಗಳೂರಿನ MRPLನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಗುತ್ತಿಗೆ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರನ್ನು 38 ವರ್ಷದ ರಾಜೇಶ್ ಡಿ’ಸಿಲ್ವಾ (ರಾಜೇಶ್ ಬ್ಯಾಪ್ಟಿಸ್ಟ್) ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ಘಟಕದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರಿಗೆ ದೇಹದ ಸುಮಾರು 35ರಷ್ಟು ಭಾಗ ಸುಟ್ಟು ಗಂಭೀರ ಗಾಯಗಳಾಗಿತ್ತು.
ಘಟನೆಯ ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶನಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಜೇಶ್ ಅವರು ಸುರತ್ಕಲ್‌ನ ಇಡ್ಯ ಗ್ರಾಮದ ಕಣ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ MRPLನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅವಿವಾಹಿತರಾಗಿದ್ದರು.
ಸೆಪ್ಟೆಂಬರ್ 30ರಂದು ನಡೆದ ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರಾ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ರಾಜೇಶ್ ಅವರ ಸಾವಿನೊಂದಿಗೆ MRPL ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಇಬ್ಬರಿಗೆ ಏರಿಕೆಯಾಗಿದೆ.







Comments