ನವರಾತ್ರಿ ದ್ವಿತೀಯ ದಿನ: ಬ್ರಹ್ಮಚಾರಿಣಿ ದೇವಿಯ ಆರಾಧನೆ, ಕಥೆ ಮತ್ತು ಪೂಜಾ ವಿಧಾನ

ನವರಾತ್ರಿ ದ್ವಿತೀಯ ದಿನ: ಬ್ರಹ್ಮಚಾರಿಣಿ ದೇವಿಯ ಆರಾಧನೆ
ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದ ಪಾರ್ವತಿ | ಭಕ್ತಿ, ತಪಸ್ಸು ಮತ್ತು ಶಾಂತಿಯ ಸಂಕೇತ ಬ್ರಹ್ಮಚಾರಿಣಿ
ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ನವದುರ್ಗೆಯ ಎರಡನೇ ಸ್ವರೂಪವಾಗಿರುವ ಬ್ರಹ್ಮಚಾರಿಣಿ ದೇವಿಯು ತಪಸ್ಸು, ತ್ಯಾಗ, ಭಕ್ತಿ ಹಾಗೂ ಸಂಯಮದ ಪ್ರತೀಕವಾಗಿ ಪರಿಗಣಿಸಲ್ಪಡುತ್ತಾಳೆ.
ಪುರಾಣಗಳ ಪ್ರಕಾರ, ದಕ್ಷಮಹಾರಾಜನ ಪುತ್ರಿ ಸತಿ ದೇವಿ ಯಜ್ಞಕುಂಡದಲ್ಲಿ ಪ್ರಾಣತ್ಯಾಗ ಮಾಡಿದ ಬಳಿಕ, ಹಿಮವಂತ ಪರ್ವತರಾಜನ ಪುತ್ರಿಯಾಗಿ ಪಾರ್ವತಿ ದೇವಿಯಾಗಿ ಪುನರ್ಜನ್ಮ ಪಡೆದಳು. ಹಿಂದಿನ ಜನ್ಮದಂತೆ ಶಿವನನ್ನೇ ಪತಿಯಾಗಿ ಪಡೆಯಬೇಕೆಂಬ ಸಂಕಲ್ಪದಿಂದ ಪಾರ್ವತಿ ದೇವಿ ಅತ್ಯಂತ ಕಠಿಣ ತಪಸ್ಸನ್ನು ಕೈಗೊಂಡಳು.
ಸಾವಿರಾರು ವರ್ಷಗಳ ಕಾಲ ಹಣ್ಣು, ಹೂವು ಹಾಗೂ ಎಲೆಗಳನ್ನು ಮಾತ್ರ ಸೇವಿಸುತ್ತಾ ತಪಸ್ಸು ಮಾಡಿದಳು. ನಂತರ ಆಹಾರವನ್ನೂ ತ್ಯಜಿಸಿ ಕಠಿಣ ಸಾಧನೆಯಲ್ಲಿ ನಿರತರಾದಳು. ಪಾರ್ವತಿಯ ಅಚಲ ಭಕ್ತಿ ಮತ್ತು ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಆಕೆಯ ಮನೋಭಿಲಾಷೆ ನೆರವೇರುವುದಾಗಿ ಆಶೀರ್ವದಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಆಕೆಗೆ ‘ಬ್ರಹ್ಮಚಾರಿಣಿ’ ಎಂಬ ಹೆಸರು ಬಂದಿದೆ.
ಬ್ರಹ್ಮಚಾರಿಣಿ ದೇವಿಯ ರೂಪ
ಬ್ರಹ್ಮಚಾರಿಣಿ ದೇವಿಯನ್ನು ಸಾಮಾನ್ಯವಾಗಿ ಬಿಳಿ ವಸ್ತ್ರ ಧರಿಸಿದ ಶಾಂತಸ್ವರೂಪದಲ್ಲಿ ಚಿತ್ರಿಸಲಾಗುತ್ತದೆ. ಒಂದು ಕೈಯಲ್ಲಿ ಜಪಮಾಲೆ ಹಾಗೂ ಮತ್ತೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುವ ರೂಪದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಈ ರೂಪವು ಶಿವನನ್ನು ಪಡೆಯಲು ಪಾರ್ವತಿ ಕೈಗೊಂಡ ಕಠಿಣ ತಪಸ್ಸಿನ ಸಂಕೇತವಾಗಿದೆ.
ಪೂಜಾ ವಿಧಾನ
ನವರಾತ್ರಿಯ ಎರಡನೇ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಿ ದೇವಿಯ ಪೂಜೆಯನ್ನು ಆರಂಭಿಸಲಾಗುತ್ತದೆ. ದೇವಿಗೆ ಹೂವು, ಅಕ್ಷತೆ, ಚಂದನ ಹಾಗೂ ಶ್ರೀಗಂಧ ಅರ್ಪಿಸಿ, ದೀಪ ಮತ್ತು ಧೂಪ ಬೆಳಗಿಸಲಾಗುತ್ತದೆ. ಬಳಿಕ ದೇವಿಯ ಮಂತ್ರಗಳನ್ನು ಜಪಿಸಿ ಆರತಿ ಮಾಡಲಾಗುತ್ತದೆ. ಪಂಚಾಮೃತ ಹಾಗೂ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ.
ಬ್ರಹ್ಮಚಾರಿಣಿ ದೇವಿಯ ಮಂತ್ರ
“ಓಂ ದೇವೀ ಬ್ರಹ್ಮಚಾರಿಣ್ಯೈ ನಮಃ” ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸುವುದು ವಿಶೇಷವೆಂದು ಪರಿಗಣಿಸಲಾಗಿದೆ.
ಪೂಜೆಯ ಮಹತ್ವ
ಬ್ರಹ್ಮಚಾರಿಣಿ ದೇವಿಯ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಹಾಗೂ ಸಂಯಮ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ, ಅವಿವಾಹಿತರಿಗೆ ಉತ್ತಮ ಸಂಗಾತಿ ಹಾಗೂ ಜೀವನದಲ್ಲಿ ಬುದ್ಧಿವಂತಿಕೆ ಮತ್ತು ಸಮಾಧಾನ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಇದೆ.
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ಭಕ್ತರು ದೇವಿಯ ಅನುಗ್ರಹವನ್ನು ಕೋರುತ್ತಾರೆ.







Comments