ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ದಿಢೀರ್ ಡ್ರಗ್ ಪರೀಕ್ಷೆ; 159 ವಿದ್ಯಾರ್ಥಿಗಳ ಪೈಕಿ ಒಬ್ಬರಲ್ಲಿ ಡ್ರಗ್ಸ್ ಪಾಸಿಟಿವ್

ಮಂಗಳೂರು ನಗರದಲ್ಲಿ ಯುವಜನರ ನಡುವೆ ಹೆಚ್ಚುತ್ತಿರುವ ಮಾದಕ ವಸ್ತುಗಳ (ಡ್ರಗ್ಸ್) ದುರ್ಬಳಕೆಗೆ ಕಡಿವಾಣ ಹಾಕಲು ನಗರ ಪೊಲೀಸರು ದಿಢೀರ್ ಪರೀಕ್ಷಾ ಕಾರ್ಯಾಚರಣೆ ನಡೆಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ದಕ್ಷಿಣ ಹಾಗೂ ಕೇಂದ್ರ ಉಪವಿಭಾಗದ ಎಸಿಪಿಗಳ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಯಿತು. ಕೋಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟ್ಸ್ ಭವನದ ಸಮೀಪ ಸಂಜೆ 4.30ರಿಂದ 6.00 ಗಂಟೆಯವರೆಗೆ ಖಾಸಗಿ ಮತ್ತು ಕಾಲೇಜು ಬಸ್‌ಗಳನ್ನು ತಡೆದು, ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಾಯಿತು.

ಈ ಕಾರ್ಯಾಚರಣೆಯ ಭಾಗವಾಗಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಕಾರ್ ಬೀರಿಯಲ್ಲಿ ವಿವಿಧ ಕಾಲೇಜುಗಳ 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಈ ಪೈಕಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಅದೇ ರೀತಿ, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ಸ್ ಭವನದ ಸಮೀಪ ಪಿ.ಎ. ಕಾಲೇಜಿನ ಎರಡು ಬಸ್‌ಗಳಲ್ಲಿದ್ದ 87 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಒಟ್ಟಾರೆಯಾಗಿ ತಪಾಸಣೆಗೊಳಪಟ್ಟ 159 ವಿದ್ಯಾರ್ಥಿಗಳಲ್ಲಿ ಒಬ್ಬರು ಮಾತ್ರ ಪಾಸಿಟಿವ್ ಕಂಡುಬಂದಿರುವುದು ಸಮಾಧಾನಕರ ವಿಷಯವಾಗಿದೆ.
ಯುವಜನರಲ್ಲಿ ಮಾದಕ ವಸ್ತು ಸೇವನೆಯ ಪ್ರಮಾಣ ಕಡಿಮೆಯಾಗುತ್ತಿರುವುದು ಉತ್ತಮ ಲಕ್ಷಣವಾಗಿದ್ದರೂ, ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತಷ್ಟು ಕಠಿಣ ಕ್ರಮಗಳು ಅಗತ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಿಕೊಡಲಾಗುವುದು ಹಾಗೂ ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಳ್ಳಲಿದ್ದಾರೆ.







Comments