ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ: ಅಕ್ಟೋಬರ್ 1ರಿಂದ ಹೊಸ ವ್ಯವಸ್ಥೆ ಜಾರಿ

ಮಂಗಳೂರು: ಕರಾವಳಿ ಕರ್ನಾಟಕದ ರೈಲ್ವೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇದುವರೆಗೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಈ ಬದಲಾವಣೆ 2026ರ ಅಕ್ಟೋಬರ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ಮಂಗಳೂರು ಸೇರಿದಂತೆ ಉಳ್ಳಾಲ ರೈಲ್ವೆ ನಿಲ್ದಾಣದವರೆಗಿನ ಪ್ರದೇಶವು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಆಡಳಿತ ವ್ಯಾಪ್ತಿಗೆ ಬರಲಿದೆ.
ಇದುವರೆಗೆ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವಿನ ರೈಲ್ವೆ ಇಂಟರ್‌ಚೇಂಜ್ ಪಾಯಿಂಟ್ ಆಗಿ ಪಡೀಲ್ ಕಾರ್ಯನಿರ್ವಹಿಸುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ ಉಳ್ಳಾಲ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಕರಾವಳಿ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಈ ಬದಲಾವಣೆಯಿಂದ ಮಂಗಳೂರು–ಬೆಂಗಳೂರು, ಮಂಗಳೂರು–ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ನಡುವಿನ ರೈಲು ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಮಂಗಳೂರು ನೈರುತ್ಯ ರೈಲ್ವೆಯ ವ್ಯಾಪ್ತಿಗೆ ಬಂದ ನಂತರ ಹೊಸ ರೈಲು ಸೇವೆಗಳ ಪ್ರಸ್ತಾವನೆ, ವೇಳಾಪಟ್ಟಿ ಪರಿಷ್ಕರಣೆ, ರೈಲುಗಳ ಸಂಚಾರ ನಿರ್ವಹಣೆ ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ವೇಗ ಸಿಗುವ ಸಾಧ್ಯತೆ ಇದೆ.
ಕರಾವಳಿ ಕರ್ನಾಟಕವನ್ನು ರಾಜ್ಯದ ಇತರ ಭಾಗಗಳೊಂದಿಗೆ ರೈಲು ಮಾರ್ಗದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ. ದಶಕಗಳಿಂದ ಮುಂದುವರಿದಿದ್ದ ಆಡಳಿತಾತ್ಮಕ ಬದಲಾವಣೆಯ ಬೇಡಿಕೆಗೆ ಇದೀಗ ಅಧಿಕೃತ ರೂಪ ಸಿಕ್ಕಂತಾಗಿದೆ.







Comments