;
top of page

12 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಮೂವರು ಸಹೋದರರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

Jul 28
1 min read

ಮಂಗಳೂರು: 12 ವರ್ಷಗಳ ಹಿಂದೆ ನಡೆದ ಗಂಗಾಧರ ಪಾಂಗಾಳ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಮೂವರು ಸಹೋದರರು ಸೇರಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2014ರಲ್ಲಿ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಸಮೀಪ ಗಂಗಾಧರ ಪಾಂಗಾಳ ಅವರನ್ನು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ, ಬೈಕಂಪಾಡಿ ಮೊಗವೀರ ಮಹಾಸಭೆಯ ಸದಸ್ಯತ್ವದಿಂದ ಅಮಾನತುಗೊಂಡಿದ್ದಕ್ಕೆ ಗಂಗಾಧರ ಪಾಂಗಾಳ ಅವರೇ ಕಾರಣ ಎಂದು ನಂಬಿ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ಆರೋಪಿಗಳು ಬೊಲೆರೋ ವಾಹನದಲ್ಲಿ ಬಂದು ಗಂಗಾಧರ ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ್ದರು. ಬಳಿಕ ಅವರು ಸ್ಥಳದಿಂದ ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ ಮೃತಪಟ್ಟಿದ್ದರು. ಪ್ರಕರಣದ ತನಿಖೆಯ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.

ಜುಲೈ 27ರಂದು ನಡೆದ ವಿಚಾರಣೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸಿತು. ಸತೀಶ್ ಬೈಕಂಪಾಡಿ (57), ಹರೀಶ್ ಬೈಕಂಪಾಡಿ (61), ಭಾಸ್ಕರ್ ಬೈಕಂಪಾಡಿ (63) ಹಾಗೂ ಉಡುಪಿ ಜಿಲ್ಲೆಯ ಶಿವಳ್ಳಿ ನಿವಾಸಿ ಪುಷ್ಪರಾಜ್ (47) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರತಿಯೊಬ್ಬ ಆರೋಪಿಗೆ ₹15,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಒಂದು ವರ್ಷದ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕಾಗಿದೆ. ಇದಲ್ಲದೆ, ಮತ್ತೊಂದು ಆರೋಪದಡಿ ಎರಡು ವರ್ಷಗಳ ಸಾದಾ ಶಿಕ್ಷೆ ಹಾಗೂ ₹1,000 ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆಯನ್ನೂ ನ್ಯಾಯಾಲಯ ಆದೇಶಿಸಿದೆ.

ಒಟ್ಟು ₹60,000 ದಂಡದ ಮೊತ್ತದಲ್ಲಿ ₹50,000 ಅನ್ನು ಮೃತ ಗಂಗಾಧರ ಪಾಂಗಾಳ ಅವರ ಪುತ್ರಿಗೆ ಪರಿಹಾರವಾಗಿ ಹಾಗೂ ಉಳಿದ ₹10,000 ಅನ್ನು ಸರ್ಕಾರಕ್ಕೆ ಪಾವತಿಸಲು ನಿರ್ದೇಶಿಸಲಾಗಿದೆ. ಪ್ರಕರಣದಲ್ಲಿ ಬಳಸಲಾದ ಬೊಲೆರೋ, ರಿಡ್ಜ್ ಹಾಗೂ ಮಾರುತಿ ಕಾರುಗಳನ್ನು ಸರ್ಕಾರದ ವಶಕ್ಕೆ ಪಡೆಯುವಂತೆಯೂ ನ್ಯಾಯಾಲಯ ಆದೇಶಿಸಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page