ಮಂಗಳೂರು: ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ವೃದ್ಧನ ರಕ್ಷಣೆ; ಪಾಯಿಂಟ್ಸ್‌ಮ್ಯಾನ್ ಸಮಯಪ್ರಜ್ಞೆಗೆ ಮೆಚ್ಚುಗೆ

ಮಂಗಳೂರು: ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿ ಹಳಿಗೆ ಬಿದ್ದ ವೃದ್ಧ ಪ್ರಯಾಣಿಕರೊಬ್ಬರನ್ನು ರೈಲ್ವೆ ಪಾಯಿಂಟ್ಸ್‌ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಸೋಮವಾರ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಮುಂಬೈನಿಂದ ಮಂಗಳೂರು ಕಡೆಗೆ ಬರುತ್ತಿದ್ದ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೃದ್ಧ ಪ್ರಯಾಣಿಕರೊಬ್ಬರು ಕೆಳಗಿಳಿದು ಅಂಗಡಿಗೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು. ಅಂಗಡಿಯಲ್ಲಿ ಬಿಟ್ಟು ಬಂದಿದ್ದ ವಸ್ತುವನ್ನು ತರಲು ಅವಸರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದಾಗ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ.
ಈ ವೇಳೆ ಕರ್ತವ್ಯದಲ್ಲಿದ್ದ ರೈಲ್ವೆ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ಘಟನೆ ಗಮನಿಸಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ರೈಲಿನ ಚಕ್ರಗಳಡಿ ಸಿಲುಕುವ ಅಪಾಯದಲ್ಲಿದ್ದ ವೃದ್ಧರನ್ನು ಹಳಿಯಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದ ಸಂಭವನೀಯ ಭೀಕರ ಅಪಘಾತವೊಂದು ತಪ್ಪಿದ್ದು, ಅವರ ಸಾಹಸಕ್ಕೆ ರೈಲ್ವೆ ಇಲಾಖೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.







Comments