;
top of page

ಮಂಗಳೂರಿನ KFC ಔಟ್‌ಲೆಟ್‌ನಲ್ಲಿ ಕೊಳೆತ ಚಿಕನ್ ಪತ್ತೆ: ಆರೋಗ್ಯಾಧಿಕಾರಿಗಳ ದಾಳಿ

Aug 16
2 min read

ಮಂಗಳೂರು: ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ KFC ಔಟ್‌ಲೆಟ್‌ನಲ್ಲಿ ಕೊಳೆತ ಚಿಕನ್ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ತಿಂಗಳ ಹಿಂದೆ ಪ್ಯಾಕ್ ಮಾಡಲಾಗಿದ್ದ ಚಿಕನ್ ಮಾಂಸ ಪತ್ತೆಯಾಗಿದೆ.

ಮಾಜಿ ಮೇಯರ್ ಹಾಗೂ ಬಿಜೆಪಿ ನಾಯಕಿ ಕವಿತಾ ಸನಿಲ್ ಅವರು ತಮ್ಮ 10 ವರ್ಷದ ಮಗುವಿಗಾಗಿ ಸ್ವಿಗ್ಗಿ ಮೂಲಕ KFCಯ ‘ಫೆರಿ ಫೆರಿ’ ಚಿಕನ್ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಆಹಾರ ಸೇವಿಸುತ್ತಿದ್ದ ವೇಳೆ ಚಿಕನ್ ಕಪ್ಪು ಬಣ್ಣಕ್ಕೆ ತಿರುಗಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಅವರು ಬಿಲ್ ಸಮೇತ ಸಿಟಿ ಸೆಂಟರ್‌ನ KFC ಔಟ್‌ಲೆಟ್‌ಗೆ ತೆರಳಿದ್ದಾರೆ.

ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳು ಔಟ್‌ಲೆಟ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವಿಷಯವನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿದುಬಂದಿದೆ.

ಪರಿಶೀಲನೆ ವೇಳೆ ಸ್ಟೋರೇಜ್ ರೂಂನ ಫ್ರೀಜರ್‌ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ಪತ್ತೆಯಾಗಿದೆ ಎನ್ನಲಾಗಿದೆ. ಸುಮಾರು ಐದಾರು ತಿಂಗಳ ಹಿಂದಿನ ಮಾಂಸವನ್ನು ದಾಸ್ತಾನು ಮಾಡಿರುವುದು ಕಂಡುಬಂದಿದ್ದು, ಸ್ಟೋರೇಜ್ ಪ್ರದೇಶದಿಂದ ದುರ್ವಾಸನೆಯೂ ಬರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೋರೇಜ್ ರೂಂನಲ್ಲಿ ಅನೈರ್ಮಲ್ಯ

ಔಟ್‌ಲೆಟ್‌ಗೆ ಚಿಕನ್ ಮಾಂಸ ಬೆಂಗಳೂರಿನಿಂದ ರವಾನೆಯಾಗುತ್ತದೆ ಎನ್ನಲಾಗಿದ್ದು, ಸ್ಟೋರೇಜ್‌ನಲ್ಲಿ ಚಿಲ್ಸ್ ಚಿಕನ್, ಫ್ರೋಜನ್ ಚಿಕನ್ ಸೇರಿದಂತೆ ವಿವಿಧ ಮಾದರಿಯ ಮಾಂಸವನ್ನು ಸಂಗ್ರಹಿಸಲಾಗಿತ್ತು. ಅಧಿಕಾರಿಗಳು ಸ್ಟೋರೇಜ್ ರೂಂ ಪ್ರವೇಶಿಸುತ್ತಿದ್ದಂತೆಯೇ ದುರ್ವಾಸನೆ ಕಂಡುಬಂದಿದ್ದು, ಸ್ವಚ್ಛತೆ ಹಾಗೂ ಸಂಗ್ರಹಣಾ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಮೂರು ಮಾದರಿಯ ಚಿಕನ್ ಮಾಂಸವನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಅವಧಿ ಮೀರಿದ ಎಣ್ಣೆ ಬಳಕೆ ಆರೋಪ

ಚಿಕನ್ ಫ್ರೈ ಮಾಡಲು ಬಳಸುತ್ತಿದ್ದ ಎಣ್ಣೆಯ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಒಂದೇ ಎಣ್ಣೆಯನ್ನು ಹಲವು ದಿನಗಳಿಂದ ಬಳಸಲಾಗುತ್ತಿತ್ತು ಎನ್ನಲಾಗಿದ್ದು, ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿಕನ್ ಮಾಂಸದ ಮೂರು ಮಾದರಿಗಳ ಜೊತೆಗೆ ಬಳಸಲಾಗುತ್ತಿದ್ದ ಎಣ್ಣೆಯ ಮಾದರಿಯನ್ನೂ ಸಂಗ್ರಹಿಸಲಾಗಿದ್ದು, ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ತಿಳಿಸಿದ್ದಾರೆ.

KFC ಔಟ್‌ಲೆಟ್ ಬಂದ್

ಪರಿಶೀಲನೆಯ ಬಳಿಕ ಸಿಟಿ ಸೆಂಟರ್ ಮಾಲ್‌ನ KFC ಔಟ್‌ಲೆಟ್ ಅನ್ನು ಬಂದ್ ಮಾಡಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

KFCಯಲ್ಲಿ ವಿವಿಧ ಚಿಕನ್ ಐಟಂಗಳಿಗೆ ಆಫರ್‌ಗಳಿರುವ ಹಿನ್ನೆಲೆಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಾರೆ. ಇಂತಹ ಜನಪ್ರಿಯ ಆಹಾರ ಮಳಿಗೆಯಲ್ಲಿ ಶಂಕಿತವಾಗಿ ಹಳೆಯ ಮಾಂಸ ಪತ್ತೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಕವಿತಾ ಸನಿಲ್ ಅವರು ಸುಮಾರು ಮೂರು ಗಂಟೆಗಳ ಕಾಲ ಸ್ಥಳದಲ್ಲಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಯುವವರೆಗೆ ಅಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ. ಇದೀಗ ಪ್ರಯೋಗಾಲಯದ ವರದಿಯ ಮೇಲೆ ಮುಂದಿನ ಕ್ರಮ ನಿರ್ಧಾರವಾಗಲಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page