ಕರ್ನಾಟಕದಲ್ಲಿ ಗುಟ್ಕಾ, ತಂಬಾಕು–ನಿಕೋಟಿನ್ ಪಾನ್ ಮಸಾಲಾ ಒಂದು ವರ್ಷ ಬ್ಯಾನ್

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಮತ್ತು/ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ.

ಕರ್ನಾಟಕ ಆಹಾರ ಸುರಕ್ಷತಾ ಆಯುಕ್ತರು ಜೂನ್ 15, 2026ರಂದು ಹೊರಡಿಸಿರುವ ಅಧಿಸೂಚನೆಯಂತೆ, ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಉತ್ಪನ್ನದ ಹೆಸರು ಅಥವಾ ಬ್ರ್ಯಾಂಡ್ ಯಾವುದೇ ಆಗಿದ್ದರೂ, ಅದರಲ್ಲಿ ತಂಬಾಕು ಅಥವಾ ನಿಕೋಟಿನ್ ಇದ್ದರೆ ಈ ನಿಷೇಧ ಅನ್ವಯವಾಗಲಿದೆ. ಪ್ಯಾಕ್ ಮಾಡಿರುವ ಅಥವಾ ಪ್ಯಾಕ್ ಮಾಡದ ಉತ್ಪನ್ನಗಳಿಗೂ ನಿಯಮ ಅನ್ವಯಿಸುತ್ತದೆ.
ಅಲ್ಲದೆ, ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಗ್ರಾಹಕರು ಸುಲಭವಾಗಿ ಬೆರೆಸಿ ಸೇವಿಸುವ ರೀತಿಯಲ್ಲಿ ಮಾರಾಟ ಮಾಡುವ ಉತ್ಪನ್ನಗಳ ಮೇಲೂ ನಿರ್ಬಂಧ ಜಾರಿಯಾಗಲಿದೆ.
ಸ್ಯಾಚೆಟ್, ಪೌಚ್, ಪ್ಯಾಕೇಜ್ ಅಥವಾ ಕಂಟೈನರ್ ಸೇರಿದಂತೆ ಯಾವುದೇ ರೂಪದಲ್ಲಿ ಪ್ಯಾಕ್ ಮಾಡಲಾಗಿರುವ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳಿಗೂ ಈ ಆದೇಶ ಅನ್ವಯಿಸುತ್ತದೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರ ಅಧಿಸೂಚನೆಯ ಮೂಲಕ ನಿಷೇಧ ಜಾರಿಗೆ ಬಂದಿದೆ.







Comments