ಶವ ಇಟ್ಟುಕೊಂಡು ಬಿಲ್ ವಸೂಲಿಗೆ ಬ್ರೇಕ್: ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಚಾಟಿ!

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ರೋಗಿಗಳಿಂದ ನಡೆಯುತ್ತಿರುವ ದುಬಾರಿ ಶುಲ್ಕ ವಸೂಲಿಗೆ ತಡೆ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮಗಳಿಗೆ ಮುಂದಾಗಿದೆ. ಆಸ್ಪತ್ರೆಗಳ ಚಿಕಿತ್ಸಾ ದರ ಹಾಗೂ ಔಷಧಗಳ ಬೆಲೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ ಚರ್ಚೆಗಳನ್ನು ನಡೆಸಿದೆ.
ರೋಗಿಗಳಿಗೆ ಅನಗತ್ಯ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ, ಇನ್ನುಮುಂದೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿಯ ಜೊತೆಗೆ ಔಷಧಗಳ ದರಪಟ್ಟಿಯನ್ನೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಚಿಕಿತ್ಸೆ ಆರಂಭಿಸುವ ಮುನ್ನವೇ ರೋಗಿಗಳಿಗೆ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬೇಕು ಹಾಗೂ ಬಿಲ್‌ಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಸರ್ಕಾರ ನಿರ್ಧರಿಸಿದೆ. ಕ್ಯಾನ್ಸರ್ ಮಾತ್ರವಲ್ಲದೆ, ಹೃದಯ ಮತ್ತು ಕಿಡ್ನಿ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ದುಬಾರಿ ಔಷಧಗಳ ಬೆಲೆ ಇಳಿಕೆ ಹಾಗೂ ಎಂ.ಆರ್.ಪಿ (MRP) ದರಗಳಲ್ಲಿ ಅನಧಿಕೃತ ಹೆಚ್ಚಳಕ್ಕೆ ಕಡಿವಾಣ ಹಾಕುವ ಕುರಿತು ಆರೋಗ್ಯ ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, ಆಸ್ಪತ್ರೆಯ ಬಾಕಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹಗಳನ್ನು ಹಸ್ತಾಂತರಿಸದೆ ತಡೆಹಿಡಿಯುವ ಅಮಾನವೀಯ ಪ್ರಕರಣಗಳಿಗೂ ಕಠಿಣ ಕಡಿವಾಣ ಹಾಕಲು ಸರ್ಕಾರ ಗಮನಹರಿಸಿದೆ. ಆರೋಗ್ಯ ವಿಮೆ ಹೊಂದಿರುವ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯಲು ಹಾಗೂ ವಿಮಾ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಲು ವಿಮಾ ಕಂಪನಿಗಳ ಜೊತೆಗೂ ಚರ್ಚೆ ನಡೆಸಲಾಗಿದೆ.
ಇದೇ ವೇಳೆ, ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ 6,291 ರೋಗಿಗಳ ಹಿತಾಸಕ್ತಿಗಾಗಿ ‘ಅಂಗಾಂಗ ಕಸಿ ದೂರದೃಷ್ಟಿ ಸಮಿತಿ’ ರಚಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಮಿದುಳು ನಿಷ್ಕ್ರಿಯತೆ ದೃಢೀಕರಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲೂ ಅಂಗಾಂಗ ಕಸಿ ಸೌಲಭ್ಯ ವಿಸ್ತರಿಸಲು ತೀರ್ಮಾನಿಸಲಾಗಿದೆ. ರೋಗಿಗಳ ಹಿತರಕ್ಷಣೆಯೊಂದಿಗೆ, ಆಸ್ಪತ್ರೆಗಳು ಎದುರಿಸುತ್ತಿರುವ ನಿಯಮಾತ್ಮಕ ಸಮಸ್ಯೆಗಳಿಗೂ ಪರಿಹಾರ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.







Comments