ಕಡಬ: ಕುಮಾರಧಾರಾ ನದಿ ತೀರದಲ್ಲಿ 8 ಕಾಡಾನೆಗಳ ಹಿಂಡು ಪ್ರತ್ಯಕ್ಷ!
- Apr 11
- 1 min read

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುಮಾರಧಾರಾ ನದಿ ತೀರದಲ್ಲಿ ಶನಿವಾರ ಎಂಟು ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆಹಾರ ಮತ್ತು ನೀರು ಹುಡುಕುತ್ತಾ ಬಂದಿರುವ ಈ ಆನೆಗಳು ಸಂಚರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಷಯ ತಿಳಿದ ಕೂಡಲೇ ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಜನವಸತಿ ಪ್ರದೇಶಕ್ಕೆ ಆನೆಗಳು ನುಗ್ಗದಂತೆ ತಡೆಯಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ನದಿ ತೀರಕ್ಕೆ ಅಥವಾ ಕಾಡಂಚಿನ ಪ್ರದೇಶಕ್ಕೆ ತೆರಳಬಾರದು ಮತ್ತು ರಾತ್ರಿ ಸಂಚಾರದ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಸೂಚಿಸಿದೆ. ಮುಖ್ಯವಾಗಿ, ಆನೆಗಳ ಹತ್ತಿರ ಹೋಗಿ ಫೋಟೋ ಅಥವಾ ವಿಡಿಯೋ ತೆಗೆಯುವ ಸಾಹಸಕ್ಕೆ ಕೈಹಾಕಬಾರದೆಂದು ಅರಣ್ಯ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.







Comments